ಸಂಚಯ

ವಿಜ್ಞಾನ, ತಂತ್ರಜ್ಞಾನ, ಹಾಗು ತಂತ್ರಾಂಶ ಕುರಿತ, ಅನುಭವಿ ವಿಚಾರ ಸಂಗ್ರಹ

ಫೆಬ್ರವರಿ 28, 2014

ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆ

ಇದೇ ಮಾರ್ಚ್ 1ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೋಸ್ಕರ ವಿಶೇಷವಾಗಿ ಮುಕ್ತವಾಗಿ ತೆರೆದಿರುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆಂದು ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ ಪ್ರತೀ ಡಿಪಾರ್ಟ್ಮೆಂಟಿನಲ್ಲೂ ವಿಶೇಶ ಪ್ರದರ್ಶನ-ವಿವರಣೆ-ಪ್ರಾತಿಕ್ಷಿಕೆ (demos, exhibits, lab tours, live exhibits, popular science lectures etc..) ಗಳಿರುತ್ತವೆ. (ದೊಡ್ಡವರೂ ಬಂದು ನೋಡಲು ಯೋಗ್ಯವಿರುತ್ತದೆ.)

This Saturday (1st March 2014), the 104-year-old Indian Institute of Science will open its doors to all for an event that will see research students and faculty of the institution demonstrate the principles of science. The annual event will be held a day before the Founder's Day celebrations at the institution. Last year, a few thousands of people attended the event.

ಇವನ್ನೂ ನೋಡಿ (openhoouse'13) :
  • http://timesofindia.indiatimes.com/home/education/news/IISc-to-open-doors-for-students-on-Saturday/articleshow/18721921.cms? 
  • http://www.iisc.ernet.in/ 
  • http://events.csa.iisc.ernet.in/opendays2014/
Read More

ಮಾರ್ಚ್ 01, 2013

ಭಾರತೀಯ ವಿಜ್ಞಾನ ಸಂಸ್ಥೆ ಶನಿವಾರ ವಿದ್ಯಾರ್ಥಿಗಳಿಗೆ ತೆರೆದಿರುತ್ತದೆ

ನಾಳೆ ಮಾರ್ಚ್ ೨ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿರುತ್ತೆ.  

(ಮುಖ್ಯವಾಗಿ ಶಾಲಾ ಕಾಲೇಜುಗಳ ಮಕ್ಕಳಿಗೆಂದು) ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ ಪ್ರತೀ ಡಿಪಾರ್ಟ್ಮೆಂಟಿನಲ್ಲೂ  ವಿಶೇಶ ಪ್ರದರ್ಶನ-ವಿವರಣೆ-ಪ್ರಾತಿಕ್ಷಿಕೆ (demos, exhibits, lab tours, live exhibits, popular science lectures etc..) ಗಳಿರುತ್ತವೆ. ದೊಡ್ಡವರೂ ಜೊತೆಗೂಡಬಹುದು. 

ಪತ್ರಿಕಾ ಪ್ರಕಟಣೆ: ಟೈಮ್ಸ್ ಆಫ್ ಇಂಡಿಯಾ
Read More

ಫೆಬ್ರವರಿ 26, 2013

ಅರೊನ್ ಸ್ವಾರ್ಟ್ಜ್ - ವಿಮುಕ್ತಿ ತಂದ ತಲೆದಂಡ

ಸಾಧನೆಗೆ ವಯಸ್ಸಿನ ಅಂತರವಿಲ್ಲ. ಹಾಗೆಯೇ ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ. ಇವರಲ್ಲಿ ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್ ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ 26ನೇ ವಯಸ್ಸಿನಲ್ಲಿ ಇಹಲೋಕದ ಬದುಕಿಗೆ ಪೂರ್ಣ ವಿರಾಮವಿಟ್ಟು ನೆನಪಾಗಿ ಉಳಿದು ಬಿಟ್ಟಿದ್ದಾನೆ.


[ಚಿತ್ರಕೃಪೆ:‌ ವಿಕಿಪೀಡಿಯ]

೧೯೮೬ ನವಂಬರ್ ೮ರಂದು ಜನಿಸಿದ ಸ್ವಾರ್ಟ್ಜ್‌ನ ತಂದೆ ರಾಬರ್ಟ್ ಸ್ವಾರ್ಟ್ಜ್ ಮತ್ತು ತಾಯಿ ಸುಸಾನ್. ಬಾಲ್ಯದಿಂದಲೇ ಅಂತರ್ಜಾಲ ಸಂಸ್ಕೃತಿಗೆ ಒಗ್ಗಿ ಹೋಗಿದ್ದ.ಹಾಗಾಗಿ ಅದರಲ್ಲೇ ತನ್ನ ಆಸಕ್ತಿಯನ್ನು ಬೆಳೆಸಿಕೊಂಡ. ತನ್ನ ೧೩ನೇ ವಯಸ್ಸಿನಲ್ಲಿ ಶೈಕ್ಷಣಿಕವಾಗಿ ಉಪಯುಕ್ತ ಜಾಲತಾಣ ನಿರ್ಮಾಣದ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡ. ಈ ಮೂಲಕ ಮಸ್ಯಾಚುಸೆಟ್ ವಿವಿಯ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಭೇಟಿ ಸಾಧ್ಯವಾಯಿತು. ಅಂತರ್ಜಾಲದ ಬಗ್ಗೆ ತನಗಿದ್ದ ತೃಷೆ ನೀಗಿಸಿಕೊಳ್ಳಲು ಅನುವಾಯಿತು. ಅಂತರ್ಜಾಲದಲ್ಲಿನ ಮಾಹಿತಿ ಎಲ್ಲರಿಗೂ ಮುಕ್ತವಾಗಿ ದೊರಕುವಂತಾಗಬೇಕೆಂಬ ದಿಟ್ಟ ನಿರ್ಧಾರದ ಜೊತೆ ಕಾರ್ಯೋನ್ಮುಖನಾದ, ಫಲವಾಗಿ 14ನೇ ವಯಸ್ಸಿನಲ್ಲೇ ಜಾಲತಾಣ ಮತ್ತು ಬ್ಲಾಗ್ ಗಳಲ್ಲಿನ ಹೊಸ ಬದಲಾವಣೆಗಳ ಮಾಹಿತಿಯನ್ನು ಪಡೆಯಲಿರುವ RSS feed(Rich Site Summary)ನ ತಂತ್ರಾಂಶ ನಿರ್ಮಾಣದಲ್ಲಿ ಕೈಜೋಡಿಸಿದ.ಇದೇ ಅಂತರ್ಜಾಲ ವಾಕ್ ಸ್ವಾತಂತ್ರ್ಯದ ತನ್ನ ಅಭಿಯಾನಕ್ಕೆ ಮುನ್ನುಡಿಯಾಯಿತು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಉಪಯೋಗ ಮತ್ತು ಹಕ್ಕುಸ್ವಾಮ್ಯ ಹೇರುವುದರಿಂದ ಮಾಹಿತಿ ವಿನಿಯೋಗಕ್ಕೆ ಅಡ್ಡಿಯಾಗುವುದರ ಕುರಿತು ಸಾಮಾಜಿಕ ಮತ್ತು ನಾಗರಿಕ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ.ಇನ್ಫೋಗಾಮಿ ಎಂಬ ಕಂಪನಿ ಸ್ಥಾಪಿಸಿ,ನಂತರ ರೆಡಿಟ್(Reddit) ಎಂಬ ಸಾಮಾಜಿಕ ಜಾಲತಾಣದ ಜೊತೆ ವಿಲೀನಗೊಳಿಸಿದ. ಇಲ್ಲಿ ಬಳಕೆದಾರರು ತಮ್ಮ ಅಭಿರುಚಿಯ ವಿಷಯಗಳನ್ನು ಹಂಚಿಕೊಳ್ಳುವ ವ್ಯವಸ್ಥೆಯಿದೆ.ಇಂದಿಗೂ ‘ಅಂತರ್ಜಾಲದ ಮುಖಪುಟ’ವೆಂಬ ಅಡಿಬರಹದ ರೆಡಿಟ್ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿದೆ. ’ಓಪನ್ ಲೈಬ್ರರಿ’ ಎಂಬ ಯೋಜನೆಯ ಮೂಲಕ ಪ್ರಕಟಿತ ಪುಸ್ತಕಗಳನ್ನು ಮುಕ್ತವಾಗಿ ಲಭಿಸುವಂತೆ ಮಾಡಿದ.

2010ರಲ್ಲಿ ಹಾವರ್ಡ್ ವಿವಿಯಲ್ಲಿ ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರಗಳ ಕುರಿತು ನೀತಿಶಾಸ್ತ್ರದ ಅಧ್ಯಯನ ನಡೆಸಿದ. ಮಾಹಿತಿ ಪೂರೈಕೆಗಾಗಿ ಹಣದ ಹೊಳೆ ಹರಿಯುವುದನ್ನು ತಡೆಗಟ್ಟಲು ಕಾರ್ಯತಂತ್ರ ರೂಪಿಸಿದ. ಇದಕ್ಕಾಗಿ ಡಿಮಾಂಡ್ ಪ್ರೊಗ್ರೆಸ್(Demand Progress) ಎಂಬ ಪ್ರಗತಿಶೀಲ ಪ್ರತಿಪಾದನಾ ಸಂಘಟನೆಯನ್ನು ಹುಟ್ಟು ಹಾಕಿದ. ಜನರನ್ನು ಮಿಂಚಂಚೆ ಮತ್ತು ಮಾಧ್ಯಮಗಳ ಮೂಲಕ ಒಟ್ಟುಗೂಡಿಸಿ ನಿರ್ದಿಷ್ಟ ವಿಚಾರದ ಕುರಿತು ಜಾಗೃತಿ ಮೂಡಿಸುವುದು ಇದರ ಮೂಲ ಧ್ಯೇಯ.ಸಂಯುಕ್ತ ಸಂಸ್ಥಾನದ ಶಾಸಕಾಂಗ ಪ್ರಸ್ತಾಪಿಸಿದ SOPA(Stop Online Piracy Act) ಮತ್ತು PIPA(PROTECT IP Act) ಎಂಬ ಎರಡು ಕಾಯ್ದೆಗಳ ವಿರುದ್ಧ ಡಿಮಾಂಡ್ ಪ್ರೊಗ್ರೆಸ್ ಸಿಡಿದೆದ್ದಿತು. ಈ ಕಾಯ್ದೆಗಳ ವಿಧೇಯಕವು ಅಂತರ್ಜಾಲದಲ್ಲಿನ ಮಾಹಿತಿಗಳ ಮೇಲಿನ ಹಕ್ಕುಸ್ವಾಮ್ಯಗಳನ್ನು ಬಲಪಡಿಸುವ ಮತ್ತು ಕೃತಿಚೌರ್ಯದ ಉಲ್ಲಂಘನೆಯನ್ನು ಹತ್ತಿಕ್ಕುವ ಉದ್ದೇಶ ಹೊಂದಿತ್ತು.ಆದರೆ ಅಂತರ್ಜಾಲಕ್ಕೆ ಇಷ್ಟೊಂದು ನಿರ್ಬಂಧಗಳನ್ನು ಹೇರಿದರೆ ಜನ ಸ್ನೇಹಿಯಾಗಿ ಉಳಿಯುವುದು ಕಷ್ಟ ಮತ್ತು ನ್ಯಾಯ ಸಮ್ಮತವೂ ಅಲ್ಲವೆಂಬ ವಾದಕ್ಕೆ ಪೂರ್ಣ ಬಹುಮತ ಸಿಕ್ಕಿತು. ಕಳೆದ ವರ್ಷ ಜನವರಿ 18ರಂದು ಕಾಯ್ದೆ ಖಂಡಿಸಿ ಸರಣಿ ಪ್ರತಿಭಟನೆಗಳು ನಡೆದವು. ಪ್ರತಿಷ್ಠಿತ ಗೂಗಲ್, ವಿಕಿಪೀಡಿಯಾ, ಮೊಜಿಲ್ಲಾ, ಫ್ಲಿಕರ್‌ಗಳು ತಮ್ಮ ಸೇವೆಯನ್ನು ರದ್ದುಪಡಿಸಿ ಕರಾಳ ದಿನವನ್ನಾಗಿ ಆಚರಿಸಿದವು. ಕೊನೆಗೂ ಕಾಯ್ದೆ ರದ್ದಾಯಿತು.


[ಚಿತ್ರಕೃಪೆ:‌ ವಿಕಿಪೀಡಿಯ]

‘ಮಾಹಿತಿಯೇ ಶಕ್ತಿ’ ಎಂಬ ಮಂತ್ರ ಪಠಿಸಿದ್ದ ಸ್ವಾರ್ಟ್ಜ್, ಅಂತರ್ಜಾಲದಲ್ಲಿ ಮಾಹಿತಿ ಹಂಚಿಕೊಳ್ಳುವುದು ಒಂದು ನೈತಿಕ ಹಕ್ಕು ಎಂದಿದ್ದ. ಕನ್ನಡಿಯೊಳಗಿನ ಗಂಟಾಗಿರದೆ ಎಲ್ಲವೂ ಎಲ್ಲರಿಗೂ ಉಚಿತವಾಗಿ ಪ್ರಾಪ್ತವಾಗಬೇಕು. ಅಲ್ಲದೇ,ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ತಂತ್ರಜ್ಞಾನದ ಲೇಪನವಾಗಿರುವಾಗ ಮಾಹಿತಿಯನ್ನು ನಿಲುಕದ ದ್ರಾಕ್ಷಿಯಂತೆ ಮಾಡದೇ ಮುಕ್ತವಾಗಿಸಬೇಕೆಂಬ ಅಭಿಪ್ರಾಯ ಪಟ್ಟಿದ್ದ. ವಸ್ತುಗಳು ಕಳವಾದರೆ ಮತ್ತೆ ಸಿಗುವುದಿಲ್ಲ. ಆದರೆ ಉತ್ತಮ ವಿಚಾರಧಾರೆಗಳು ಕಳವಾದರೆ ಅಥವಾ ಹಂಚಿ ಹೋದರೆ ಸಾಮಾಜಿಕ, ಕೈಗಾರಿಕಾ, ಆರ್ಥಿಕ ಕ್ರಾಂತಿಗೆ ಕಾರಣವಾಗಬಹುದು. ಹೆಚ್ಚು-ಹೆಚ್ಚು ಮಾಹಿತಿಗಳನ್ನು ಕಲೆ ಹಾಕಿ ವಿತರಿಸುವುದರಿಂದ ಬದಲಾವಣೆಗಳನ್ನು ಕಲ್ಪಿಸಲು ಸಾಧ್ಯ. ಎಲ್ಲಿಂದ ಎಲ್ಲಿಗೋ ಸಂಪರ್ಕ ಬೆಳೆಸುವ ಕಂಪ್ಯೂಟರ್ ಯುಗದಲ್ಲಿ ನಕಲು, ಕೃತಿಚೌರ್ಯ ಸರ್ವೇ ಸಾಮಾನ್ಯ. ಕಳೆದ 20 ವರ್ಷಗಳಿಂದೀಚೆಗೆ ಅನೇಕ ಪುಸ್ತಕ ಪ್ರಕಾಶಕರು, ಧ್ವನಿ ಮುದ್ರಣ ಸಂಸ್ಥೆಗಳು ಇದರ ಲಾಭ/ನಷ್ಟ ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಮಾಹಿತಿಯನ್ನು ಇತಿಮಿತಿಯೊಳಗೆ ಹಂಚುವ ಉದ್ದೇಶದಿಂದ ಪ್ರಾರಂಭವಾದ ಕ್ರಿಯೇಟಿವ್ ಕಾಮನ್ಸ್(Creative Commons) ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಸ್ವಾರ್ಟ್ಜ್ ಕೂಡ ಒಬ್ಬನಾಗಿದ್ದ.

ಬಂಡವಾಳಶಾಹಿಗಳ ಮತ್ತು ರಾಜಕಾರಣಿಗಳ ಕಟು ಧೋರಣೆಗಳನ್ನು ಧಿಕ್ಕರಿಸಿಕೊಂಡು ಬಂದಿದ್ದ ಸ್ವಾರ್ಟ್ಜ್,ಇದನ್ನು ಸಹಿಸದೆ ಕಾನೂನಿನ ಚೌಕಟ್ಟು ಮೀರಿ ಎರಡು ಪ್ರಮುಖ ಅಪರಾಧಗಳಲ್ಲಿ ಭಾಗಿಯಾದ.

೧. ಸಂಯುಕ್ತ ಸಂಸ್ಥಾನದ ಫೆಡರಲ್ ನ್ಯಾಯಾಲಯದಲ್ಲಿ ಸಾರ್ವಜನಿಕರ ಉಪಯೋಗಕ್ಕಿರುವ ವಿದ್ಯುನ್ಮಾನ ಕಡತಗಳಿಗೆ(PACER-Public Access to Court Electronic Records) ಶುಲ್ಕ ಪಾವತಿ ಮಾಡಬೇಕಿತ್ತು. ಸ್ವಾರ್ಟ್ಜ್ ಮತ್ತು ಸಮಾನ ಮನಸ್ಕರು ಸರ್ಕಾರಿ ಕಡತಗಳಿಗೆ ಹಕ್ಕುಸ್ವಾಮ್ಯವಿಲ್ಲದಿದ್ದರೂ ಜನರಿಂದ ಹಣ ಕಬಳಿಸುತ್ತಿದ್ದುದನ್ನು ಮನಗಂಡರು. ಇದಕ್ಕಾಗಿ ಫೆಡರಲ್ ಕೋರ್ಟ್ನ ೧೭ ಗ್ರಂಥಾಲಯಗಳಿಂದ ಸುಮಾರು ೨ ಕೋಟಿ ಪುಟಗಳಷ್ಟು ಮಾಹಿತಿಯನ್ನು ಸ್ವಾರ್ಟ್ಜ್ ಅಕ್ರಮವಾಗಿ ಕಸಿದುಕೊಂಡ. FBIಯಿಂದ ವಿಚಾರಣೆಗೊಳಗಾದರೂ ಸೂಕ್ತ ಸಾಕ್ಷ್ಯವಿಲ್ಲದೆ ಪ್ರಕರಣ ಖುಲಾಸೆಯಾಯಿತು.

೨. ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಪ್ರೌಢ ಪ್ರಬಂಧಗಳು ಸಾರ್ವಜನಿಕವಾಗಿ ಲಭಿಸುತ್ತಿಲ್ಲವೆಂಬ ಕೂಗು ಕೇಳಿಬಂತು. JSTOR (Journal STORAGE) ಎಂಬುದು ಒಂದು ಡಿಜಿಟಲ್ ಲೈಬ್ರರಿ. ಇಲ್ಲಿ ಸುಮಾರು ೭೦೦೦ ವಿವಿಗಳ ಶೈಕ್ಷಣಿಕ ಪ್ರಬಂಧಗಳ ಸಂಗ್ರಹವಿದೆ. ಸ್ವಾರ್ಟ್ಜ್ ಮಸ್ಯಾಚುಸೆಟ್ ವಿವಿಗೆ ಸಂಬಂಧಪಟ್ಟ ಸುಮಾರು ೪ ಮಿಲಿಯ ಶೈಕ್ಷಣಿಕ ಸಂಚಿಕೆಗಳನ್ನು ಅಕ್ರಮವಾಗಿ ಕದ್ದಿರುವುದು ಹಲವರ ಕೆಂಗಣ್ಣಿಗೆ ಗುರಿಯಾಯಿತು. ಜುಲೈ ೧೯, ೨೦೧೧ರಂದು ವಿವಿ ಪರ ವಕೀಲ ಕಾರ್ಮೆನ್ ಓರ್ಟ್ಸ್ Computer Fraud and Abuse Act ಅಡಿಯಲ್ಲಿ ಕಾನೂನು ಕ್ರಮಕ್ಕೆ ಸ್ವಾರ್ಟ್ಜ್‌ಅನ್ನು ಒಳಪಡಿಸಿದ. ಆದರೆ ಸ್ವಾರ್ಟ್ಜ್ ಶರಣಾಗಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆಯಾದ. JSTOR ಉಚಿತವಾಗಿ ತನ್ನ ಮಾಹಿತಿಯನ್ನು ಹಂಚದೆ ಮೋಸ ಮಾಡುತ್ತಿದೆಯೆಂಬ ಕಾರಣಕ್ಕೆ ಸ್ವಾರ್ಟ್ಜ್ ಈ ಕೃತ್ಯ ಎಸಗಿದ್ದ.

ಪ್ರಕರಣದ ವಿಚಾರಣೆ ಮಾಡಿದ ಫೆಡರಲ್ ನ್ಯಾಯಾಲಯ ತನ್ನ ತೀರ್ಪನ್ನು ನೀಡಿತು. ಈ ಪ್ರಕಾರ ಸ್ವಾರ್ಟ್ಜ್ ಗೆ ೩೫ ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಲಾಗಿತ್ತು. ಅಷ್ಟೇ ಅಲ್ಲದೆ ಆರೋಪ ಪಟ್ಟಿಯನ್ನು ೪ರಿಂದ ೧೩ಕ್ಕೆ ಏರಿಸಲಾಗಿತ್ತು. ಸ್ವಾರ್ಟ್ಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾವಾಯಿತು. ದುರಂತವೆಂದರೆ, ಇದಾದ ಎರಡು ದಿನಗಳಲ್ಲಿ ಅಂದರೆ ಜನವರಿ ೧೧, ೨೦೧೩ರಂದು ತಾನಿದ್ದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾದ. ವೈಯುಕ್ತಿಕ ಕಾರಣಗಳಿಂದ ಜೀವ ತೆಗೆದುಕೊಂಡ ಎಂದು ದಾಖಲು ಮಾಡಿದರೂ, ಫೆಡರಲ್ ನ್ಯಾಯಾಲಯದ ತೀರ್ಪು ಮುಳುವಾಗಿ ಪರಿಣಮಿಸಿರಬೇಕೆಂದು ಸಮರ್ಥಿಸಿಕೊಂಡರೂ ತಪ್ಪಿಲ್ಲ. ಸ್ವಾರ್ಟ್ಜ್ ಉಚಿತ ಮತ್ತು ಸಮಾನವಾಗಿ ಮಾಹಿತಿಯ ಪೂರಣಕ್ಕೆ ಅಂತರ್ಜಾಲವನ್ನು ವಾಹಿನಿಯಾಗಿ ಬಳಸಿಕೊಂಡ. ಖಾಸಗೀಕರಣದ ವಿರುದ್ಧ ‘Private Theft On Public Culture’ ಎಂದು ಜರಿದಿದ್ದ. ಮಾಹಿತಿಯ ಹರಿವಿನಲ್ಲಿರುವ ಅಸಮಾನತೆಯ ಕುರಿತು ಜಗತ್ತಿಗೇ ತಿಳಿಹೇಳಿದ ಒಬ್ಬ ಅಪ್ರತಿಮ ಸಾಧಕನನ್ನು ಕಳೆದುಕೊಂಡಿದ್ದೇವೆ. ಅನೇಕ ಲೇಖಕರು ತಮ್ಮ ಹಕ್ಕುಸ್ವಾಮ್ಯದ pdf(portable document format) ಕೃತಿಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಒಂದು ವೇಳೆ ಅಂತರ್ಜಾಲಕ್ಕೆ ಆಲೋಚನೆ ಮಾಡುವ ಶಕ್ತಿಯಿರುತ್ತಿದ್ದರೆ ಸ್ವಾರ್ಟ್ಜ್ ಸಾವಿನಿಂದ ದುಃಖ ತಪ್ತವಾಗುತ್ತಿತ್ತು.

ಲೇಖಕ: ಸಂದೀಪ ಫಡ್ಕೆ, ಮುಂಡಾಜೆ
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನವರು. ಕಲೆ, ಸಾಹಿತ್ಯ, ಸಂಗೀತ ಆಸಕ್ತಿಯ ಕ್ಷೇತ್ರ. ಓದಿದ್ದು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಇಂಜಿನೀರಿಂಗ್ ಪದವಿ. ಸದ್ಯ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ಕಂಡದ್ದು-ಕೇಳಿದ್ದು-ಅನಿಸಿದ್ದಕ್ಕೆ ಅಕ್ಷರ ರೂಪ ಕೊಡುವುದು ಹವ್ಯಾಸ. 'ದೀವಟಿಗೆ' ಎನ್ನುವ, ತಮ್ಮ ಬ್ಲಾಗನಲ್ಲಿ ಆಗಾಗ್ಗೆ ಬರೆಯುತ್ತಾರೆ.
Read More

ಫೆಬ್ರವರಿ 15, 2013

೨೦೧೩ ಗಣರಾಜ್ಯೋತ್ಸವ - ಅರಿವಿನ ಅಲೆಗಳು - ಮುಕ್ತಾಯ

ಸಹೃದಯ ಓದುಗರೆ,

ಜನವರಿ ೨೬, ೨೦೧೩ ರಿಂದ ಪ್ರಾರಂಭಗೊಂಡು ಇದುವರೆಗೂ, ೧೩ 'ಅರಿವಿನ ಅಲೆ'ಗಳನ್ನು ಹಲವು ಬರಹಗಾರರಿಂದ ಪಡೆದು, ಪರಿಷ್ಕರಿಸಿ ನಿಮ್ಮ ಮುಂದೆ ಇಟ್ಟಿರುತ್ತೇವೆ. ಇವುಗಳನ್ನು ಓದಿದ ಮೇಲೆ ತಮಗೆ ಲೋಪದೋಷಗಳೇನಾದರೂ ಕಂಡುಬಂದಲ್ಲಿ, ದಯವಿಟ್ಟು ಆಯಾ ಅಲೆಗಳ ಅಡಿಯಲ್ಲಿ ತಪ್ಪದೇ ಪ್ರತಿಕ್ರಿಯಿಸಿ. ಅನಿಲ್ ರಮೇಶ್ ಅವರ 'ಪಕ್ಷಿ ವೀಕ್ಷಣೆ' ಬರಹದಿಂದ ಪ್ರಾರಂಭವಾದ ಈ ಸಂಚಿಕೆಯು, ಮುರಳಿ ಎಚ್. ಆರ್. ಅವರ 'ಕರ್ನಾಟಕ ಸೈಕಲ್ ರಿಪಬ್ಲಿಕ್' ಎಂಬ ಸರಣಿಯೊಂದಿಗೆ ಮುಕ್ತಾಯಗೊಳ್ಳುತ್ತಿದೆ. ಈ ಸಂಚಿಕೆಯ E-book ಪ್ರತಿಯನ್ನು ಸದ್ಯದಲ್ಲಿಯೇ ತಯಾರಿಸಿ, ಸಂಚಯ ತಾಣದಲ್ಲಿಯೇ ಪ್ರಕಟಿಸಲಾಗುತ್ತದೆ. ದಯವಿಟ್ಟು ನಿರೀಕ್ಷಿಸಿ.

ಸಂಚಯದ '೨೦೧೩ ಗಣರಾಜ್ಯೋತ್ಸವ' ಸಂಚಿಕೆಯನ್ನು ತಮ್ಮ ಬರಹಗಳ ಮೂಲಕ ಯಶಸ್ವಿಗೊಳಿಸಿದ ಸಮಸ್ತ ಬರಹಗಾರರಿಗೂ, ಸಂಚಯ ತಂಡ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ ಹಾಗೆಯೇ, ಮುಂಬರುವ ಸಂಚಿಕೆಗಳಲ್ಲಿಯೂ ಸಹ ತಮ್ಮ ಮತ್ತಷ್ಟು ಬರಹಗಳು ಎಲ್ಲರಿಗೂ ಸಿಗಲಿ ಎಂದು ಆಶಿಸುತ್ತದೆ. ಓದುಗ ವೃಂದವೂ ಸಹ ಮುಂದಿನ ಸಂಚಿಕೆಯಲ್ಲಿ ತಮ್ಮ ಬರಹವನ್ನು ನೀಡಿ, ಓದುಗರ ಜೊತೆ ಬರಹಗಾರರೂ ಆಗುತ್ತೀರೆಂದು ನಂಬಿರುತ್ತೇವೆ.

ಇಂತಿ, ಸಂಚಯ ತಂಡ
Read More

೨೦೧೩ ಗಣರಾಜ್ಯೋತ್ಸವ - ಅಲೆ ೧೩ - ಕರ್ನಾಟಕ ಸೈಕಲ್ ರಿಪಬ್ಲಿಕ್ - ಭಾಗ ೩

ಸಮುದಾಯ ಸೈಕಲ್ ವ್ಯವಸ್ಥೆ

ಈಗ ಯೂರೋಪಿಯನ್ ದೇಶಗಳಲ್ಲಿ ಸೈಕಲ್ ಸುಲಭವಾಗಿ ಕೈ ಎಟಕುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಸೈಕಲ್ ಗಳನ್ನು ನಿಲ್ಲಿಸಿರುತ್ತಾರೆ. ಸೈಕಲ್ ಬಳಸಲು ಅಪೇಕ್ಷಿಸುವರು ಮುಂಚೆಯೆ ನೊಂದಾಯಿಸಿಕೊಂಡಿರುತ್ತಾರೆ. ನೊಂದಾಣಿಕೆಯ ಜೊತೆಗೆ ಅವರಿಗೆ ಒಂದು ಕಾರ್ಡ್ ಸಿಗುತ್ತದೆ.ಆ ಕಾರ್ಡ್ ಮೂಲಕ ಅವರು ಸೈಕಲ್ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ , ಹಾಗೆಯೇ ಮತ್ತೆ ಸೈಕಲ್ ಹಿಂದಿರುಗಿಸುತ್ತಾರೆ. ಅಲ್ಲಿಯ ತಂತ್ರಾಂಶ ಅವರು ಬಳಸಿದ ಕಾಲಕ್ಕೆ ತಕ್ಕಂತೆ ಅವರ ಕಾರ್ಡ್ ನಿಂದ ಹಣವನ್ನು ಪಾವತಿ ಮಾಡಿಕೊಳ್ಳುತ್ತದೆ.

ಇಂತಹ ಯೋಜನೆ ಫಲಕಾರಿಯಾಗಿ ಈ ಊರುಗಳಲ್ಲಿ ಚಾಲನೆಯಲ್ಲಿದೆ:

೧) ವೆಲಿಬ್, ಪ್ಯಾರಿಸ್, ಫ್ರಾನ್ಸ್.೨) ಬೈಸಿಂಗ್, ಬಾರ್ಸಿಲೋನಾ ಸ್ಪೇನ್.ಈ ಯೋಜನೆಯಿಂದ ಸಮುದಾಯಕ್ಕಾಗುವ ಲಾಭ:

೧) ಹಿಂಸೆ ಮತ್ತು ಒತ್ತಡ ಕಡಿಮೆಯಾಗುವುದು: ಪಾಶ್ಚಾತ್ಯ ಜಗತ್ತಿನಿಂದ ಬಂದಿರುವ ಆಧುನಿಕ ಸಾರಿಗೆ ವ್ಯವಸ್ಥೆ ರಸ್ತೆಯನ್ನು ಬಿಸಿ ರಕ್ತದಲ್ಲಿ ತೋಯ್ದು ಹಿಂಸೆಯ ಪಥವನ್ನಾಗಿ ಪರಿವರ್ತಿಸಿದೆ.ನಿತ್ಯ ಲೆಕ್ಕ ವಿಲ್ಲದಷ್ಟು ಮಂದಿ ಸಾವನ್ನು ಹಿಂಸೆಯ ನೋವನ್ನು ಅನುಭವಿಸುತ್ತಾರೆ. ನಮ್ಮ ನಾಡಿನ ಚರಿತ್ರೆಯಲ್ಲಿ ಹಾಗೂ ನಮ್ಮ ನಾಡಿನ ಜನರ ಹೃದಯಾಂತರಂಗದಲ್ಲಿ ಅಹಿಂಸೆಯ ಸಂಸ್ಕೃತಿ ಬೆರೆತು ಹೋಗಿದೆ. ಇಂದು ಜಗತ್ತು ಹಿಂಸೆಯ ಬಲೆಯಲ್ಲಿ ಸಿಳುಕಿ ಛಿದ್ರ ಛಿದ್ರ ವಾಗಿರುವಾಗ ನಾವು ಕರುನಾಡಿನ ಮಕ್ಕಳು ಕೂಡಿ ಅಹಿಂಸೆಯ ಹೊಸ ಪಥದ ಸಂಶೋಧನೆ ಮಾಡ ಬೇಕಾಗಿದೆ.ಸೈಕಲ್ ಅಹಿಂಸೆಗೆ ಒಳ್ಳೆಯ ವಾಹನ.

೨) ಸರ್ಕಾರಕ್ಕೆ ಹಣದ ಉಳಿತಾಯ: ಹೆಚ್ಚು ಮಂದಿ ಸೈಕಲ್ ಬಳಸಿದಷ್ಟು ಹೆಚ್ಚು ಹೆಚ್ಚು ಹಣ ಅನಗತ್ಯ ಯೋಜನೆಗಳಿಗೆ ವ್ಯಯವಾಗುವುದು ನಿಲ್ಲುತ್ತದೆ.ಇದೇ ಹಣವನ್ನು ಸರ್ಕಾರ ಸದುಪಯೋಗ ಮಾಡಿ ಕೊಳ್ಳಬಹುದು.

೩) ಪರಿಸರ ಮಾಲಿನ್ಯವಂತೂ ತಾನೇ ತಾನಾಗಿ ನಿಂತು ಹೋಗುತ್ತದೆ.

೪) ನಗರದ ಜನ ಜೀವನದಲ್ಲಿ ಆರೋಗ್ಯ ನವೋಲ್ಲಾಸ ಮತ್ತು ಲವಲವಿಕೆ ಕುಣಿದಾಡುತ್ತಿರುತ್ತದೆ.

೫) ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಯೋಜನೆಯ ತಂತ್ರಾಂಶವನ್ನು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗುವಂತೆ ನಾವು ಆಶ್ವಾಸನೆಯನ್ನು ನೀಡುತ್ತೇವೆ. ಇದರಿಂದ ಈ ಯೋಜನೆಯ ಲಾಭ ಕೇವಲ ಕನ್ನಡಿಗರಷ್ಟೇ ಅಲ್ಲದೇ ಇಡಿ ವಿಶ್ವದ ಸಮುದಾಯ ಪಡೆಯುತ್ತದೆ.

೬) ನಾಳೆ ಮೆಟ್ರೋ ಬೆಂಗಳೂರಿನಲ್ಲಿ ಬಂದ ನಂತರ ಮೆಟ್ರೋ ಸ್ಟೇಷನ್ ಗಳಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳದ ಒತ್ತಡವಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರಿಂದ ಮೆಟ್ರೋ ಸ್ಟೇಷನ್ ತಲುಪಲು ಸೈಕಲ್ ಬಳಸಿದರೆ ಮೆಟ್ರೋ ಯೋಜನೆಗೆ ಈ ನಮ್ಮ ಯೋಜನೆ ಪೂರಕವಾಗುತ್ತದೆ.

ಈ ವ್ಯವಸ್ಥೆಯನ್ನು ನಾವು ಬೆಂಗಳೂರಿನ ಭಾರತೀಯ ವಿದ್ಯಾ‌ಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕ್ಯಾಂಪಸ್ ಸೈಕಲ್ ಬಾಡಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತೇನೆ. ಇಲ್ಲಿಯವರೆಗೂ ಸುಮಾರು 2000 ಯಾತ್ರೆಗಳು ಮುಗಿದ ಈ‌ ಕಾರ್ಯಕ್ರಮ ಮುಕ್ತ ತಂತ್ರಾಂಶದ ಮೇಲೆ ಚಲಿಸುತ್ತದೆ. ಗುಬ್ಬಿ ಲ್ಯಾಬ್ಸ್ ಕೊಟ್ಟಿರುವ 'ECBike 'ತಂತ್ರಾಂಶದಿಂದ ಸೈಕಲ್ ಬಾಡಿಗೆಗೆ ತೆಗೆದುಕೊಳ್ಳುವುದರ ಜೊತೆಗೆ ಪರಿಪೂರ್ಣ ಸೈಕಲ್ ಬಾಡಿಗೆಗೆ ಕೊಡುವ ಕ್ರಿಯೆಯನ್ನು ವೆಬ್ ಮೂಲಕ ನೋಡುವ ವ್ಯವಸ್ಥೆ ಕೂಡ ಇದೆ. ಈ ಯೋಜನೆಯನ್ನು ಕರ್ನಾಟಕದ ಇತರೆ ನಗರಗಳಲ್ಲಿ ಹಾಕುವ ಪ್ರಯತ್ನ ಈ ವರ್ಷ ಮಾಡುತ್ತಿದ್ದೇವೆ. ನಿಮಗೆ ನಿಮ್ಮ ಊರಲ್ಲಿ ಈ ವ್ಯವಸ್ಥೆಯನ್ನು ಹಾಕಿಸಬೇಕು ಅಂತಾ‌ ಇದ್ದರೆ ನನ್ನನ್ನು ಸಂಪರ್ಕಿಸಿ.

ಇದರ ಸಂಕ್ಷಿಪ್ತ ಚಿತ್ರಣವನ್ನು ಕೆಳಗೆ ಕೊಟ್ಟಿರುವೆ.

ಸೈಕಲ್ ಪ್ರವಾಸೋದ್ಯಮ

ಸೈಕಲ್ ಪ್ರವಾಸೋದ್ಯಮ ಪಾಶ್ಚಾತ್ಯ ದೇಶಗಳಲ್ಲಿ ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ನಾನು ಪ್ಯಾರಿಸ್ ಗೆ ಭೇಟಿಯಿತ್ತಾಗ ಸುಲಭವಾಗಿ ಸೈಕಲ್ ಬಾಡಿಗೆಗೆ ತೆಗೆದು ಊರೆಲ್ಲಾ‌ ಅಡ್ಡಾಡುವ ಸುವರ್ಣಾವಕಾಶ ನನಗೆ ಲಭಿಸಿತು. ಯುರೋಪಿನ ನದಿಗಳ ಪಕ್ಕದಲ್ಲಿ ತುಳಿಯುವುದಕ್ಕೆ ಸೈಕಲ್ ಟ್ರಾಕ್ ವಿಶೇಷವಾಗಿ ಕಲ್ಪಿಸಿರುತ್ತಾರೆ. ವನ್ಯಜೀವಿಗಳಿರುವ ಕಾಡಿನಲ್ಲಿ ಕೂಡ ಸೈಕಲ್ ಟ್ರಾಕ್ ನಿರ್ಮಾಣ ಮಾಡಿರುತ್ತಾರೆ. ಪರಿಣಾಮದಲ್ಲಿ ಕೆಲವು ಚಿತ್ರಗಳು ಪದಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಅಂತಹ ಚಿತ್ರಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇನೆ.ನಮ್ಮ ರಾಜ್ಯದಲ್ಲಿ ಸೈಕಲ್ ಪ್ರವಾಸೋದ್ಯಮದ ಮೈಸೂರಿನ ' ಮೈ ಸೈಕಲ್ ' ಅಮೇರಿಕದವರೊಬ್ಬರು ಪ್ರಾರಂಭಿಸಿರುತ್ತಾರೆ. ಸೈಕಲ್ ಪ್ರವಾಸೋದ್ಯಮವನ್ನು ಹಳೇಬೀಡು-ಬೇಲೂರು, ಐಹೊಳೆ-ಬಾದಾಮಿ, ಹಂಪಿ-ಚಿತ್ರದುರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಂಡರೆ ಸಾವಿರರು ಕೆಲಸಗಳು ಉತ್ಪತ್ತಿಯಾಗುತ್ತವೆ. ಅಲ್ಲದೆ ನಮ್ಮ ನಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪರಿಚಯ ವಿಭಿನ್ನ ರೀತಿಯಲ್ಲಿ ಪರಿಚಯಿಸುತ್ತಾ‌ ನಮ್ಮ ಹೆಮ್ಮೆಯ ಚಾರಿತ್ರೆಯನ್ನು ಜಗತ್ತಿಗೆ ಎತ್ತಿ ತೋರಿದಂತಾಗುತ್ತದೆ. ಅದಲ್ಲದೆ ಸೈಕಲ್ ಪ್ರವಾಸೋದ್ಯಮ ಶಬ್ದ ಮಾಲಿನ್ಯವನ್ನಾಗಲಿ ಅಥವಾ ವಾಯು ಮಾಲಿನ್ಯವನ್ನಾಗಲಿ ಸೃಷ್ಠಿ ಮಾಡುವುದಿಲ್ಲಾ. ಇದರಿಂದ ನಮ್ಮ ಸ್ಮಾರಕಗಳು ಸುರಕ್ಷಿತವಾಗಿರುತ್ತವೆ.

ಸೈಕಲ್ ಪ್ರವಾಸೋದ್ಯಮದ ಮತ್ತೊಂದು ಆಯಾಮವೆಂದರೆ ವಿಶ್ವ ಸೈಕಲ್ ಪರ್ಯಾಟನೆ. ಸೈಕಲ್ ಕೆಲಸವನ್ನು ಕೈಗೆತ್ತಿಕೊಂಡಾಗಿನಿಂದ ಹಲವಾರು ಮಂದಿ ವಿಶ್ವವನ್ನೇ ಸೈಕಲ್ ಮೇಲೇ ಪರ್ಯಟನೆಯನ್ನು ಮಾಡಿರುವವದರ ಅರಿವು ಮತ್ತು ಅವರ ನೇರ ಸಂಪರ್ಕವು ಆಗಿದೆ. ಕೆಲವರಂತು ಒಬ್ಬೊಬ್ಬರೆ ವಿಶ್ವವನ್ನೇ ಸೈಕಲ್ ಮೇಲೆ ಸುತ್ತಿದ್ದಾರೆ. ಇವರೆಲ್ಲಾ ನಮ್ಮ ದೇಶ ಮತ್ತು ಜನರ ಬದುಕಿನ ರೀತಿ ಮತ್ತು ನಮ್ಮ ನಂಬಿಕೆಯ ಬಗ್ಗೆ ತಮ್ಮ ಊರಿನಲ್ಲಿ ತಮ್ಮವರ‌ ಮುಂದೆ ವರದಿಯನ್ನು ಒಪ್ಪಿಸುತ್ತಾರೆ. ನಮ್ಮ ದೇಶಕ್ಕೆ ಇದರಿಂದ ಹೊರಗಿನ ಜನರ ಜೊತೆ ಮೈತ್ರಿಯನ್ನು ಸಾಧಿಸುವುದಕ್ಕೆ ಅನುಕೂಲವಾಗುತ್ತದೆ. ಈ ಎರಡು ವರ್ಗದವರಿಗೆ ಸೈಕಲ್ ಪ್ರವಾಸೋದ್ಯಮಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡ ಬೇಕಾಗಿದೆ.

ಕೆಲವು ಗುಂಪುಗಳು ಯುವಕರನ್ನು ಸೈಕಲ್ ಯಾತ್ರೆಗೆ ಕೊಡಗು ಮತ್ತಿತ್ತರೆ ವನ್ಯ ಪ್ರದೇಶಕ್ಕೆ ಕೊಂಡಯ್ಯುತ್ತಾರೆ. ನಾವೆ ಆಯೋಜಿಸುವ ಟೂರ್ ಆಫ್ ನಿಲ್ಗಿರಿಸ್ ಭಾರತದ ಪ್ರಮುಖ ಸೈಕಲ್ ಟೂರ್. ಈ ಯಾತ್ರೆಯಲ್ಲಿ ಭಾಗವಹಿಸಲು ಅಮೇರಿಕಾ, ಯುರೋಪ್ ದೇಶದಿಂದ ಹಲವಾರು ಜನ ಬರುತ್ತಾರೆ. ಅವರಿಗೆ ಕೇವಲ ಇಪ್ಪತ್ತೈದು ಸಾವಿರಕ್ಕೆ ಮೂರು ರಾಜ್ಯಗಳಾದ ತಮಿಳುನಾಡೂ, ಕರ್ನಾಟಕ, ಕೇರಳದ ಕಾಡು ಪ್ರದೇಶವನ್ನು ತೋರಿಸುತ್ತೇವೆ. ನಮ್ಮ ನಾಡಿನ ಎಷ್ಟೋ ರೋಚಕ ಜಾಗಗಳನ್ನು ಹಾದಿಯಲ್ಲಿ ನೋಡುತ್ತಾ ಸಾಗುವುದು ಅವರಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.
ಸೈಕಲ್ ರೇಸಿಂಗ್

ಒಲಂಪಿಕ್ಸ್ ಮತ್ತು ಪ್ರಾನ್ಸ್ ದೇಶದಲ್ಲಿ ನಡೆಯುವ 'ಟೂರ್ ಡೇ ಫ್ರಾನ್ಸ್' ನಂತಹ ಸೈಕಲ್ ರೇಸಿಂಗ್ ಪಂದ್ಯಾವಳಿಗಳು ಸೈಕಲ್ ಗೆ ಒಂದು ಘನತೆಯನ್ನು ಮತ್ತು ಗಾಂಭೀರ್ಯವನ್ನು ತಂದು ಕೊಟ್ಟಿದೆ. ಈ ರೇಸ್ ಗಳು ನಡೆಯದಿದ್ದರೆ, ನಮ್ಮ ದೇಶದಲ್ಲಿ ಇರುವ ಅಟ್ಲಾಸ್ ಸೈಕಲ್ ನಂತೆ ಸೈಕಲ್ ತಾಂತ್ರಿಕವಾಗಿ ಅಭಿವೃಧ್ಧಿಯಾಗದೆ ಕೊಳೆತು ಮೂಲೆಗುಂಪಾಗುವ ಸಂಭವವಿತ್ತು. ಸೈಕಲ್ ರೇಸಿಂಗ್ ಆರಂಭಿಸಿದ ಮೇಲೆ ಸೈಕಲ್ ಕಂಪನಿಗಳು ಸೈಕಲ್ ರೇಸ್ ಮಾಡುವ ತಂಡಗಳಿಗೆ ಪ್ರಾಯೋಜಕರಾಗಿ ಸೈಕಲ್ ಮಾರಾಟವನ್ನು ಹೆಚ್ಚಿಸಿಕೊಂಡರು.

ವಿಶ್ವದ ಅತೀ ದೊಡ್ಡ ಕ್ರೀಡೆಗಳಲ್ಲಿ 'ಟೂರ್ ಡೇ ಫ್ರಾನ್ಸ್' ಮೂರನೇ ಸ್ಥಾನವನ್ನು ಪಡೆದಿರುತ್ತದೆ. (ಮೊದಲನೇ ಸ್ಥಾನ ಒಲಂಪಿಕ್ಸ್, ಎರಡನೆ ಸ್ಥಾನ ಫುಟ್ ಬಾಲ್). ಈ‌ ರೇಸಿನ ಅಂಕಿ ಅಂಶಗಳನ್ನು ಪರಿಶಿಲಿಸೋಣವೆ.

೧) 21 ದಿನಗಳಲ್ಲಿ 3500 ಕಿಮಿ ದೂರ ಸಾಗಿ ಫ್ರಾನ್ಸ್ ದೇಶವನ್ನು ಜಗತ್ತಿಗೆ ತೋರಿಸುತ್ತದೆ.

೨) 20 ತಂಡಗಳು ಭಾಗವಹಿಸುತ್ತವೆ. ಒಂದೊಂದು ತಂಡದಲ್ಲಿ 9 ಸವಾರರಿರುತ್ತಾರೆ.

೩) 180 ದೇಶಗಳಲ್ಲಿ ಟಿವಿಯಲ್ಲಿ ನೇರ ಪ್ರಸಾರವಾಗುತ್ತದೆ.

೪) 76 ರೇಡಿಯೋ ಕೇಂದ್ರಗಳು ಕಮೆಂಟರಿಯನ್ನು ನೇರ ಪ್ರಸಾರ ಮಾಡುತ್ತಾರೆ.

೫) 1000 ಲಕ್ಷ ಯುರೋಗಳ ಬಡ್ಜೆಟ್.

ಹೀಗೆ ಒಂದು ಬೃಹತ್ ಮಟ್ಟದಲ್ಲಿ ಸೈಕಲ್ ರೇಸ್ ಆಯೋಜಿಸುವ ಫ್ರಾನ್ಸ್, ಸೈಕಲನ್ನು ಆ ದೇಶದ ಸಂಸ್ಕೃತಿಯ ಪ್ರತಿಬಿಂಬವನ್ನಾಗಿ ಬಹಳ ಸಫಲವನ್ನಾಗಿ ಮಾಡಿದೆ.
ನಮ್ಮ ರಾಜ್ಯದಲ್ಲಿ ಸೈಕಲ್ ರೇಸ್ ನಾವು ಕರ್ನಾಟಕ ಸರ್ಕಾರದೊಂದಿಗೆ ಕೈ ಜೋಡಿಸಿ ಮೈಸೂರು ದಸರೆಯಲ್ಲಿ ಆಯೋಜಿಸುತ್ತೇವೆ. ರಾಜ್ಯದ ಎಲ್ಲಾ‌ ಜಿಲ್ಲೆಗಳಿಂದ ನೂರಾರು ಜನ ಬಂದರು, ಬಿಜಾಪುರ ಮತ್ತು ಬಾಗಲಕೋಟೆಯಿಂದ ಹೆಚ್ಚು ಮಂದಿ ಸ್ಪರ್ಧಿಗಳಾಗಿ ಬರುತ್ತಾರೆ. ಸೈಕಲ್ ರೇಸಿಂಗ್ ಅವರಿಗೆ ಮುಂದೆ ರೈಲು ಇಲ್ಲಾಖೆಯಲ್ಲೋ ಅಥವಾ‌ ಮಿಲಿಟರಿಯಲ್ಲೋ ಕೆಲಸಗಿಟ್ಟಿಸಿಕೊಳ್ಳುವುದಕ್ಕೆ ಸುಲಭವದ ದಾರಿ. ರಾಷ್ಟ್ರ ಮಟ್ಟದಲ್ಲಿ ಒಂದೆರಡೂ ರೇಸ್ ಗೆದ್ದರೆ ಕೆಲಸ ಸುಲಭವಾಗಿ ಸಿಗುತ್ತದೆ. ಬಡತನದ ಬೆಗೆಯಿಂದ ತಪ್ಪಿಸಿಕೊಳ್ಳಲು ಸೈಕಲ್ ಕ್ರೀಡೆ ಸಲೀಸಾದ ಮಾರ್ಗ.

ಈ ಕ್ರೀಡೆಯನ್ನು ಮತ್ತಷ್ಟು ಪ್ರಚುರ ಪಡಿಸಲು ಕರ್ನಾಟಕ ರಾಜ್ಯದ ಪರಿಪೂರ್ಣ ಸಾಗುವ ಒಂದು ರೇಸ್ ಮಾಡಬೇಕೆಂಬುದು ನನ್ನ ಅಭಿಲಾಷೆ. ಇದರಿಂದ ಕರ್ನಾಟಕವನ್ನು ಜಗತ್ತಿಗೆ ಬಿಂಬಿಸಿದಂತಾಗುತ್ತದೆ. ಅದಲ್ಲದೆ ಸೈಕಲ್ ಮತ್ತಷ್ಟು ಜನಪ್ರಿಯವಾಗುತ್ತದೆ.


ಸೈಕಲ್ ಮತ್ತು ಮಾಲಿನ್ಯರಹಿತ, ಸುರಕ್ಷಿತ ಚಲನೆಯ ಬಗ್ಗೆ ಅರಿವನ್ನು ಮೂಡಿಸುವುದು.

ಸೈಕಲ್ ಬಗ್ಗೆ ಅರಿವು ಮೂಡಿಸುವ ಯೋಜನೆಗಳು ಸದ್ಯದಲ್ಲಿ ಸಣ್ಣ ಸಣ್ಣ ಮಟ್ಟದಲ್ಲಿ ಆಗಿದ್ದರು ಸಿನಿಮಾ ಮತ್ತು ದೂರದರ್ಶನದಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು. ಶಾಲ ಮತ್ತು ಕಾಲೇಜುಗಳಲ್ಲಿ ಸೈಕಲ್ ತಂಡಗಳನ್ನು ಮಾಡಿಕೊಂಡು ತಿಂಗಳಿಗೊಮ್ಮೆ ಎಲ್ಲರೂ ಸೈಕಲ್ ಮೇಲೆ ಒಟ್ಟಿಗೆ ಬರುವುದರಿಂದ ಒಗ್ಗಟ್ಟು ಮತ್ತು ಮಜ ಎರಡು ಒಟ್ಟಿಗೆ ಬರುತ್ತದೆ. ಸೈಕಲ್ ಬಗ್ಗೆ ಅರಿವು ಮೂಡಿಸುವಾಗ -ನಿತ್ಯ ಸೈಕಲ್ ತುಳಿಯುವುದರಿಂದ ಬೊಜ್ಜು ದೇಹವಾಗಲಿ , ಹೃದಯದ ವೀಕ್ ನೆಸ ಆಗಲಿ ಇರುವುದಿಲ್ಲಾ. ನಿತ್ಯ ಸೈಕಲ್ ತುಳಿದು ಕಚೇರಿಗಾಗಲಿ / ಆಫೀಸಿಗೆ ಹೋಗುವುದರಿಂದ ವ್ಯಾಯಾಮ ತಾನೇ ತಾನಾಗಿ ಆಗುತ್ತದೆ. ಸೈಕಲ್ ಸತತವಾಗಿ ತುಳಿಯುವುದರಿಂದ ಶ್ವಾಸ ಕೋಶದ capacity ಕೂಡ ಹೆಚ್ಚುತ್ತದೆ. ನಮ್ಮ ಇಂದ್ರಿಯಗಳು ಸೂಕ್ಷ್ಮ ವಾಗಿ ರುತ್ತವೆ. ಇಂತಹ ಒಳ್ಳೆಯ ಅಂಶಗಳನ್ನು ತಿಳಿಸುತ್ತಾ, ಸೈಕಲ್ ತುಳಿಯುವವರ ಬಗ್ಗೆ ಮತ್ತು ಅವರು ಮಾಡಿರುವ ಸಾಧನೆಗಳನ್ನು ಚಿತ್ರದ ಮೂಲಕ ತಿಳಿಸ ಬೇಕು.

ಈ ಸೂತ್ರಗಳನ್ನು ಒಳಗೊಂಡು ಸೈಕಲ್ ರಿಪಬ್ಲಿಕ್ ಮುಂದಿನ ಚುನಾವಣೆಯ ಸರ್ವಪಕ್ಷಗಳ ಪ್ರಣಾಳಿಕೆಯಲ್ಲಿ ಇರಲಿ. ಮತ್ತು ಕನ್ನಡ ಜನರ ಪ್ರಾಣವಾಗಿ ಸಂಚರಿಸುವ ನನ್ನ ಪ್ರಾಣ ದೇವ ಆಂಜನೇಯ ಸರ್ವಜನರಿಗೂ‌ ವಾಯುವಿನಲ್ಲಿ ಭಕ್ತಿಯುಂಟಾಗುವ ಹಾಗೆ ಮಾಡಲಿ. ವಾಯುವಿಗೆ ಮಾಲಿನ್ಯವಿಲ್ಲದಿದ್ದರೂ ಮನುಷ್ಯ ವಾಯುವಿನ ಮೇಲೆ ತನ್ನ ಕರ್ಮದ ಫಲವಾದ ಹೊಗೆಯನ್ನು ಆರೋಪಿಸಿ ವಾಯು ಮಾಲಿನ್ಯಯೆನ್ನುವ ಬದಲಿ , ವಾಯು ಜೀವೋತ್ತಮ - ಸೈಕಲ್ ಸರ್ವೋತ್ತಮ ಯಾಕೆ ಅನ್ನಬಾರದು?


ಲೇಖಕ: ಮುರಳಿ ಎಚ್. ಆರ್.
ಪರಿಸರ ಪ್ರೇಮಿ, ಸೈಕಲ್ ಚಾಲಕ ಹಾಗೂ ಸೈಕಲ್ ಚಾಲನೆಯ ಮಹತ್ವಗಳ ಪ್ರಚಾರಕ. ಸೈಕಲ್ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬುದು ಮುರಳಿ ಅವರ ಹೊಸ ಕನಸು. ಬಿಎಂಟಿಸಿ ಜತೆ ಕೈ ಜೋಡಿಸಿ ಎಲ್ಲಾ ಟಿಟಿಎಂಸಿಗಳಲ್ಲಿ ಸೈಕಲ್ ಬಸ್‌ಗಳನ್ನು ರೂಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದಲ್ಲದೆ ಸೈಕಲ್ ಆರ್ಥಿಕತೆ ಕುರಿತು ಗುಬ್ಬಿ ಲ್ಯಾಬ್ಸ್ ಜತೆಗೂಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹಣಕಾಸು ವ್ಯವಸ್ಥೆಗೆ ಸೈಕಲ್‌ಗಳು ಹೇಗೆ ನೆರವಾಗಿವೆ ಎಂಬುದನ್ನು ತಿಳಿಸುವುದು ಸಂಶೋಧನೆಯ ಉದ್ದೇಶ. ದಿನಪತ್ರಿಕೆ ಮಾರುವವರು, ಕೊರಿಯರ್ ಸಂಸ್ಥೆಗಳು, ಹಾಲು ಮಾರಾಟಗಾರರು ಇತ್ಯಾದಿ ಸಮುದಾಯಗಳ ಸೈಕಲ್ ಬಳಕೆ ಹಾಗೂ ಅದರ ಆರ್ಥಿಕ ಲಾಭಗಳನ್ನು ಸಂಶೋಧನೆಯಲ್ಲಿ ಅವಲೋಕಿಸಲಾಗುತ್ತಿದೆ.
Read More

ಫೆಬ್ರವರಿ 14, 2013

೨೦೧೩ ಗಣರಾಜ್ಯೋತ್ಸವ - ಅಲೆ ೧೩ - ಕರ್ನಾಟಕ ಸೈಕಲ್ ರಿಪಬ್ಲಿಕ್ - ಭಾಗ ೨

ನಗರಗಳನ್ನು ಕಟ್ಟುವ ಪರಿ

ಮಹಾತ್ಮ ಗಾಂಧಿಯವರು ಹಳ್ಳಿಗಳೆ ನಮ್ಮ ರಾಷ್ಟ್ರದ ಜೀವಾಳ ಎಂದು ಗ್ರಾಮ ಜೀವನವನ್ನು ಎತ್ತಿ ಹಿಡಿದು ವಿಶ್ವಕ್ಕೆ ಮಾದರಿ ಎಂದು ಸಾರಿದರು. ಆದರೆ ಭಾರತ ದೇಶದ ಸ್ವಾತಂತ್ರ್ಯ ಬಂದ ನಂತರ ಹಳ್ಳಿಗಳ ಜೀವನ ಮತ್ತು ಗ್ರಾಮೀಣ ಜೀವನ ವೈಖರಿಯನ್ನು ಕಡೆಗಣಿಸಲಾಯಿತು. ಹಳ್ಳಿಗಳಿಂದ ನಗರದತ್ತ ಒಲಸೆ ಬರುವ ಗುಂಪು ಹೆಚ್ಚುತ್ತಾ‌ ಹೋಗುತ್ತಿದೆ. ಎಲ್ಲರೂ ಬಯಸುವುದು ಎರಡು ತುತ್ತು ಊಟ, ರಾತ್ರಿ ಹೊತ್ತು ಮಲಗಲು ಒಂದು ಸೂರು, ಕೈಗೆ ಒಂದಿಷ್ಟು ದುಡ್ಡು ಕೊಡೂವ ಕೆಲಸ. ತೊಂಬತ್ತರ ದಶಕದಲ್ಲಿ ಪ್ರಾರಂಭಗೊಂಡ ಜಾಗತೀಕರಣದ ಪ್ರಕ್ರಿಯೆ ನಗರಕ್ಕೆ ವಲಸೆ ಬರುವವರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿತು. ಈಗ ನಗರಕ್ಕೆ ಯಾವ ಪ್ರಮಾಣದಲ್ಲಿ ಜನ ವಲಸೆ ಬರುತ್ತಿದ್ದಾರೆ ಎನ್ನುವುದನ್ನು ನೋಡೋಣ. ಬೆಂಗಳೂರಿಗೆ ವಲಸೆ ಬಂದ ಮಂದಿಯ ಪೈಕಿ ಉತ್ತರ ಪ್ರದೇಶದಿಂದ ಈಶಾನ್ಯ ಭಾರತದ ಅಸ್ಸಾಂ,ಮಣಿಪುರ ಮತ್ತು ಇತರೆ ರಾಜ್ಯಗಳ ಜನರು ಇದ್ದಾರೆ. ಬೃಹತ್ ಬೆಂಗಳುರು ನಗರ ಆಧಾರಿತ ಗಿರೀಶ್ ಕರ್ನಾಡರ ನಾಟಕ 'ಬೆಂಗಳೂರು' ಬಗ್ಗೆ ಬರೆಯುತ್ತಾ‌, ಜೋಗಿ ಹೀಗೆ ಬರೆದಿದ್ದಾರೆ , "ಮಹಾನಗರದ ಮಾಯೆ. ಬಯಕೆಗಳನ್ನು ಬೆಳೆಸುತ್ತಾ, ಆಮಿಷಗಳನ್ನು ತುಂಬುತ್ತಾ, ಮೋಹವನ್ನು ಮುಪ್ಪುರಿಗೊಳಿಸುತ್ತಾ, ಅಭಯವನ್ನು ನೀಡುತ್ತಾ, ಆತಂಕದಲ್ಲಿ ದೂಡುತ್ತಾ ಅದು ತನ್ನನ್ನು ತಾನು ಬದುಕಿಸಿಕೊಳ್ಳಲು ನೋಡುತ್ತದೆ."

ನನಗೆ ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ನಿಂತಾಗಲೆಲ್ಲಾ‌ ಈ ಭಾವನೆ ಹೃದಯದಲ್ಲಿ ಮಿಡುಕಾಡುತ್ತಿರುತ್ತದೆ. ಆತಂಕ ಮತ್ತು ಆಮಿಷಗಳು ಬೃಹತ್ ನಗರಗಳ ಜೀವನಾಡಿ. ಅದರಿಂದ ನಾವು ನಗರಗಳನ್ನು ಕಟ್ಟುವ, ನಗರಗಳನ್ನು ಬೆಳೆಸುವ ಮತ್ತು ನಗರದಲ್ಲಿ ನಡೆಯುವ ಮಾನವ ಜೀವನದ ಕಲ್ಪನೆಯನ್ನು ಕುರಿತು ಜಿಜ್ಞಾಸೆಯನ್ನು ಬೆಳೆಸಿಕೊಳ್ಳದಿದ್ದರೆ ಇತ್ತ ನಗರದಲ್ಲಿ ಅಸ್ತಿತ್ತ್ವ ಕಳೆದುಕೊಂಡು ಅತ್ತ ಹಳ್ಳಿಗಳು ಆರ್ಥಿಕ ಬಿಕ್ಕಟಿನಿಂದ ಅಸ್ತಿಪಂಜರಗಳಾಗಿ ಬಿಟ್ಟಾಗ, ನೆಲೆಯಿದ್ದು ನೆಲೆ ಕಳೆದುಕೊಂಡ ,ದೇಹವಿದ್ದು ವಿದೇಹರಾಗಿ, ರೂಪವಿದ್ದು ಕುರೂಪಿಗಳಾಗಿ, ಹಣವಿದ್ದು ಭಿಕ್ಷುಕರಾಗಿ, ಪ್ರಜ್ಞೆಯಿದ್ದು ಮೂರ್ಛೆ ಹೋದಂತವರಾಗುತ್ತೇವೆ. ಸದ್ಯದ ನಗರಗಳನ್ನು ಕಟ್ಟುವ ಪರಿಯನ್ನು ನೋಡಿದಾಗ ಕಾಣುವುದಾದರೇನು - ದಿನ ನಿತ್ಯ ರಸ್ತೆ ಅಗೆಯುವುದು, ಗುಂಡಿ ತೋಡುವುದು, ಸಣ್ಣ್ ದಾದ ರಸ್ತೆಯಲ್ಲಿ ಇದ್ದಕಿದ್ದಂತೆ ಐದು ಸಾವಿರ ಅಪಾರ್ಟ್ ಮೆಂಟ್ ಎದ್ದು ಬಿಡುವುದು, ಬಡವರನ್ನು ಒಕ್ಕಲೆಬ್ಬಿಸಿ ಮಾಲ್ ಕಟ್ಟುವುದು - ಹೀಗೆ ಸರ್ಕಾರದ ಕ್ರಿಯೆಗಳನ್ನು, ವ್ಯಕ್ತಿಯ ವ್ಯಯಕ್ತಿಕ ಕರ್ಮ ಖಾಂಡವನ್ನು ಮತ್ತು ಖಾಸಗಿ ಕಂಪನಿಗಳ ಆಕಾಂಕ್ಷೆಗಳನ್ನು ಒಳಗೊಂಡ ಯೋಜನೆಗಳನ್ನು ಸಮಗ್ರವಾಗಿ ಅವಲೋಕಿಸಿದರೆ ಎಲ್ಲವೂ‌ ಒಟ್ಟಿನಲ್ಲಿ ನಗರವನ್ನು ಹರಿದರಿದು ಛಿದ್ರ ಛಿದ್ರವನ್ನಾಗಿ ಮಾಡುತ್ತಿರುವುದು ಗೋಚರವಾಗುತ್ತದೆ.

ಮಹಾತ್ಮ ಗಾಂಧಿಯವರು ಬಟ್ಟೆಯನ್ನು ನೂಲುವುದು, ಗಾಣದ ಎಣ್ಣೆ ತೆಗೆಯುವುದು, ಗುಡಿ ಕೈಗಾರಿಕೆ ಹೀಗೆ ಕೈ ಕಸುಬಿಗೆ ಪ್ರಾಧಾನ್ಯ ಕೊಡುವ ಗ್ರಾಮೀಣ ಜೀವನದ ವಕ್ತಾರರಾದರೆ, ಅಂಬೇಡ್ಕರ್ ಭಾರತೀಯ ಗ್ರಾಮೀಣ ಬದುಕು ದಲಿತರಿಗೆ ದುಸ್ತರವಾಗಿದೆ, ಹಳ್ಳಿಗಳು ಜಾತಿ ಪದ್ಧತಿಯ ಕೊಳಕು ಹೊತ್ತಿರುವ ತಿಪ್ಪೆ ಗುಂಡಿಯೆಂಬ ಭಾವನೆಯಿಂದ ವಿಪರೀತ ತಿರಸ್ಕಾರದಿಂದ ನೋಡಿದರು. ಅಂಬೇಡ್ಕರ್ ಹಳ್ಳಿಗಳನ್ನು ತೊರೆದು ದಲಿತರು ನಗರಗಳಿಗೆ ನುಗ್ಗಲು ಕರೆಯಿತ್ತರು. ಆದರೆ ಇಬ್ಬರು ಮುಂದೆ ಬರುವ ಪೀಳಿಗೆಗೆ ಭೂಮಿಯನ್ನು ಬಳಸುವ, ನೀರನ್ನು ಪ್ರೀತಿಸುವ ರೀತಿ, ವಾಯುವನ್ನು ತಿಳಿಯಾಗಿಸುವ ಕಲೆಯ ಬಗ್ಗೆ ಮಾತಾನ್ನಾಡಲಿಲ್ಲಾ. ಅದರಿಂದ ಭಾರತದ ಯಾವುದೇ ನಗರಕ್ಕೆ ಹೋದರು ಅಲ್ಲಿ ಕೆರೆಯಾಗಲಿ ಅಥವಾ‌ನದಿಯಾಗಲಿ ಇದ್ದರೆ ಅದು ಕೊಚ್ಚೆಯನ್ನು ಹೊತ್ತ ಚರಂಡಿಯಾಗಿರುತ್ತದೆ. ಯಮುನೆ, ಗಂಗೆಯರೆ ವಿಪರೀತ ಮಾಲಿನ್ಯಗೊಂಡಿರುವುದು.

ಹೀಗೆ ಗ್ರಾಮ ಬದುಕಿನ ಸರಳತೆಯು ಇಲ್ಲದೆ, ದೊಡ್ಡ ನಗರವನ್ನು ಕಟ್ಟುವ ಮತ್ತು ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕುಶಲತೆಯು ಇಲ್ಲದೆ ಕನ್ನಡ ನಾಡಿನ ಜನ ತ್ರಿಶಂಕು ಸ್ವರ್ಗ ವಾಸಿಗಳಾಗಿದ್ದೇವೆ. ಇತ್ತ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ವಾದಗಳನ್ನು ಜೊತೆ ಜೊತೆಗೆ ಸಂಯೋಜಿಸುವ ದಿಕ್ಕಿನಲ್ಲಿ ಸಣ್ಣ ಸಣ್ಣ ನಗರಗಳನ್ನು ಕಟ್ಟುವ ಆವಶ್ಯಕತೆ ಇಂದು ನಮಗಿದೆ.

ಮಹಾತ್ಮ ಗಾಂಧಿಯವರು ಬಯಸಿದಂತೆ ಸರಳತನವನ್ನು ಒಳಗೊಂಡು, ಅಂಬೇಡ್ಕರ್ ಬಯಸಿದಂತೆ ಅಸಮಾನಾತೆ ಮತ್ತು ಶೋಷಣೆಯನ್ನು ಮೀರಿದ ಜಾಗದ ಕಲ್ಪನೆ ನಾವು ಮಾಡಲೇ ಬೇಕು.ಇಂದಿನ ಗ್ರಾಮೀಣ ಜೀವನ ಮತ್ತು ನಗರ ಜೀವನ ಎರಡು ತಮ್ಮ ಹದವನ್ನು ಕಳೆದುಕೊಂಡಿವೆ. ಎರಡು ಜಾಗದಲ್ಲಿ ಮನುಷ್ಯ ತನ್ನನ್ನು ತಾನು ಕಳೆದುಕೊಂಡಂತೆ ಭಾಸವಾಗುತ್ತಿದೆ.

ನಾನು ಬೆಂಗಳೂರಿಗೆ ಹೊಸದಾಗಿ ಬಂದಾಗ ಬಸ್ಸ್ ಹತ್ತಿದ ಕೂಡಲೆ ಜಯನಗರ ಕಾಂಪ್ಲೆಕ್ಸ್ ಗೆ ಟಿಕೇಟ್ ಕೊಡೀ ಅಂತಿದ್ದರು. ಈ‌ ಕಾಂಪ್ಲೆಕ್ಸ್ ಅನ್ನುವ ಪದದ ಅರ್ಥ ತಿಳಿದುಕೊಳ್ಳುವುದಕ್ಕೆ, ಕಾಂಪ್ಲೆಕ್ಸ್ ಬಳಿ ಹೋಗಿ ನೋಡಿದೆ. ಕಾಂಪ್ಲೆಕ್ಸ್ ಅಂದರೆ ನೂರಾರು ಚಟುವಟಿಕೆಗಳು ನಡೆಯುವ ಕೇಂದ್ರ, ಇದು ಬಹು ಮಹಡಿ ಕಟ್ಟಡವನ್ನು ಒಳಗೊಂಡಿರುತ್ತದೆ. ಒಳಗೇನಿದೆ ಎನ್ನುವುದು ಹೊರಗಿನವರಿಗೆ ಸರಳವಾಗಿ ತಿಳಿಯುವುದಿಲ್ಲಾ. ಬೆಂಗಳುರಂತೂ ವಿಪರೀತ ' ಕಾಂಪ್ಲೆಕ್ಸ್ ಸಿಸ್ಟಮ್ ' . ನೀರಾಗಲಿ, ಬೆಂಕಿಯಾಗಲಿ, ಊಟವಾಗಲಿ ದುಡ್ಡೂ ತೆತ್ತು ಬೇರೆಲ್ಲಿಂದಲೋ ಧಿಮಾಕಿನಿಂದ ತರುವ ಈ ಊರಿಗೆ ಹಣವಿದ್ದರೆ ಎಲ್ಲವೂ ಸಲೀಸಾಗಿ ನಿಭಾಯಿಸಬಹುದೆಂಬ ಹಿರಿದಾದ ಭ್ರ್..ಮೆ..ಯಿದೆ. ನಗರಗಳು ದೊಡ್ಡದಾದಷ್ಟು ಕಾಂಪ್ಲೆಕ್ಸ್ ಆಗುತ್ತವೆ. ಕಾಂಪ್ಲೆಕ್ಸಿಟಿ ಅಥವಾ‌ ಸಂಕೀರ್ಣತೆ ಹೆಚ್ಚಾದಷ್ಟು ಮನುಷ್ಯನ ಆತ್ಮವನ್ನು ಬಂಧನದಲ್ಲಿಡುತ್ತವೆ. ನಗರಗಳು ಭಯವನ್ನು ಉತ್ಪತ್ತಿ ಮಾಡಿ ಮನುಷ್ಯನನ್ನು ಏಕಾಂಗಿ ಮಾಡುತ್ತವೆ. ಅದರಿಂದ ಮನುಷ್ಯ ಮನುಷ್ಯನನ್ನು ಹತ್ತಿರ ತರುವ, ಮಾನವ ಹೃದಯಗಳನ್ನು ಒಂದುಗೂಡಿಸುವ , ಮಾನವ ಕಿವಿಗಳಿಗೆ ಹಿತಕರಿಯಾದ ಸ್ಥಳಗಳನ್ನು ಸೃಷ್ಠಿಸ ಬೇಕು. ಯಾವಾಗ ಮನುಷ್ಯರು ಸಮಾಜ ಮತ್ತು ತನ್ನ ಸುತ್ತಲಿನ ಜಗತ್ತಿನಿಂದ ವಿಮುಖರಾಗದೆ ಅರಿವಿನಿಂದ ಬದುಕುತ್ತಾರೋ ಆಗ ಕಾಂಪ್ಲೆಕ್ಸಿಟಿಯು ಸಡಿಲಗೊಳ್ಳುತದೆ ಎಂದು ನಾನು ನಂಬಿದ್ದೇನೆ.

'ಕಾರ್ಬನ್ ಮುಕ್ತ ' ನಗರಗಳು

ಯುರೋಪಿನ ಹಲವಾರು ನಗರಗಳು 'ಕಾರ್ಬನ್ ಮುಕ್ತ ' ಯೋಜನೆಯನ್ನು ರೂಪಿಸಿಕೊಂಡು ಕಾರ್ಯತತ್ಪರರಾಗಿದ್ದಾರೆ. ಈ ನಗರಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವುದಕ್ಕೆ ಸೈಕಲ್ ಇದ್ದರೆ ಸಾಕು. ಕಚೇರಿ, ವಸತಿ, ಶಾಲೆ ಮತ್ತು ಆಸ್ಪತ್ರೆ ಮತ್ತು ಇತರೆ ಸೊಉಕರ್ಯಗಳು ಸಮಗ್ರವಾಗಿ ಪೂರ್ವದಲ್ಲಿ ನಿಗಧಿ ಪಡಿಸಿದ ಸ್ಥಳದಲ್ಲಿಯೆ ಕಟ್ಟುತ್ತಾರೆ. ಇದರಿಂದ ಊರನ್ನು ಕಟ್ಟಿದ ಮೇಲೆ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲಾ. ನಮ್ಮಲ್ಲಿ ಸರ್ಕಾರಕ್ಕಾಗಲಿ ಅಥವಾ‌ ಇತರೆ ಖಾಸಗಿ ಸಂಸ್ಥೆಗಳಿಗಾಗಲಿ ಇಂತಹ ದೂರದೃಷ್ಠಿ ಇರುವುದಿಲ್ಲಾ. ಅದರಿಂದ ನಮ್ಮ ನಗರದ ಗುಣಮಟ್ಟ ತೀರಾ‌ ಕಳಪೆಯಾಗಿದೆ. ಒಳ್ಳೆಯ ರಸ್ತೆಯಾಗಲಿ ಅಷ್ಟೇಕೆ ರಡೆಯಲು ಒಳ್ಳಯ ಪುಟ್ ಪಾತ್ ಕೂಡ ಇರುವುದಿಲ್ಲ. ಆದರೆ ನಮ್ಮ ಪೂರ್ವಜರು ಕಟ್ಟಿದ ನಗರಗಳಲ್ಲಿ ಒಂದು ರೀತಿಯ ವ್ಯವಸ್ಥಿತವಾದ ಶಿಸ್ತು ಕಾಣಿಸುತ್ತದೆ. ಶ್ರೀ ರಂಗಂ ದೇವಸ್ಥಾನ ವಿಶ್ವದಲ್ಲಿಯೆ ದೊಡ್ಡ ಧಾರ್ಮಿಕ 'ಕಾಂಪ್ಲೆಕ್ಸ್'. ಆ ಊರನ್ನು ಕಟ್ಟುವಾಗ ನೀರಿನ ಬಗ್ಗೆ ಮುಂಚಿತವಾಗಿಯೆ ಚಿಂತಿಸಿದ್ದರು.ಕೆಲವು ದಿನಗಳ ಹಿಂದೆ ಗೋಕರ್ಣಕ್ಕೆ ಹೋಗಿದ್ದೆ. 'ಕಾರ್ - ಮುಕ್ತ' ನಗರದ ಕಲ್ಪನೆ ನನ್ನ ಮನಸ್ಸಿನಲ್ಲಿ ಇತ್ತು ಆದರೆ ಇಲ್ಲಿ ಅಂತಹ ಊರು ನನ್ನ ದೇಶದ ಹಿತ್ತಲಿನಲ್ಲಿಯೆ ಇರುವುದನ್ನು ಕಂಡು ಹಿಗ್ಗಿದೆ. ಸದ್ಯಕ್ಕೆ ಒಂದು ನಗರದ ನೀಲ ನಕ್ಷೆಯನ್ನು ಕೆಳಗೆ ಕೊಟ್ಟಿರುವೆನು. ಈ ನಗರ ಯುರೋಪಿನ ಡಚ್ ದೇಶದಲ್ಲಿದೆ. ಊರಿನ ಒಳಗಡೆ ಬಾರಿ ವಾಹನಗಳಿಗೆ ಮತ್ತು ವೇಗವಾಗಿ ಹೋಗುವ ವಾಹನಗಳ ಚಲನೆಯನ್ನು ನಿಷೇದಿಸಿದೆ. ಇನ್ನು ಹಲವಾರು ನಗರಗಳು ಸೈಕಲ್ ಸುಗಮವಾಗಿ ಚಲಿಸಲು ವಿವಿಧ ರೀತಿಯ ಸವಲತ್ತುಗಳನ್ನು ಒದಗಿಸಿರುತ್ತಾರೆ. ಈ ಕೆಲವು ಸವಲತ್ತುಗಳ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ. ಅದಲ್ಲದೇ ಯೂರೋಪಿಯನ್ ದೇಶಗಳು ಸೈಕಲ್ ಬಳಕೆಯನ್ನು ಎಷ್ಟರ ಮಟ್ಟಿಗೆ ಉತ್ತೇಜನ ನೀಡಿದೆ ಎನ್ನುವುದು ಕೆಳಗಿನ ಚಿತ್ರಗಳಿಂದ ಸಾಬೀತಾಗುತ್ತದೆ.

ಲೇಖಕ: ಮುರಳಿ ಎಚ್. ಆರ್.
ಪರಿಸರ ಪ್ರೇಮಿ, ಸೈಕಲ್ ಚಾಲಕ ಹಾಗೂ ಸೈಕಲ್ ಚಾಲನೆಯ ಮಹತ್ವಗಳ ಪ್ರಚಾರಕ. ಸೈಕಲ್ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬುದು ಮುರಳಿ ಅವರ ಹೊಸ ಕನಸು. ಬಿಎಂಟಿಸಿ ಜತೆ ಕೈ ಜೋಡಿಸಿ ಎಲ್ಲಾ ಟಿಟಿಎಂಸಿಗಳಲ್ಲಿ ಸೈಕಲ್ ಬಸ್‌ಗಳನ್ನು ರೂಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದಲ್ಲದೆ ಸೈಕಲ್ ಆರ್ಥಿಕತೆ ಕುರಿತು ಗುಬ್ಬಿ ಲ್ಯಾಬ್ಸ್ ಜತೆಗೂಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹಣಕಾಸು ವ್ಯವಸ್ಥೆಗೆ ಸೈಕಲ್‌ಗಳು ಹೇಗೆ ನೆರವಾಗಿವೆ ಎಂಬುದನ್ನು ತಿಳಿಸುವುದು ಸಂಶೋಧನೆಯ ಉದ್ದೇಶ. ದಿನಪತ್ರಿಕೆ ಮಾರುವವರು, ಕೊರಿಯರ್ ಸಂಸ್ಥೆಗಳು, ಹಾಲು ಮಾರಾಟಗಾರರು ಇತ್ಯಾದಿ ಸಮುದಾಯಗಳ ಸೈಕಲ್ ಬಳಕೆ ಹಾಗೂ ಅದರ ಆರ್ಥಿಕ ಲಾಭಗಳನ್ನು ಸಂಶೋಧನೆಯಲ್ಲಿ ಅವಲೋಕಿಸಲಾಗುತ್ತಿದೆ.
Read More

ಫೆಬ್ರವರಿ 13, 2013

೨೦೧೩ ಗಣರಾಜ್ಯೋತ್ಸವ - ಅಲೆ ೧೩ - ಕರ್ನಾಟಕ ಸೈಕಲ್ ರಿಪಬ್ಲಿಕ್ - ಭಾಗ ೧

ಇದೇನಪ್ಪಾ‌ ನಾನೇನಾದರೂ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ ಸೇರಿಕೊಂಡ್ ಬಿಟ್ಟೆ ಅನ್ನುವ ಅನುಮಾನವೇ‌? ಅಥವಾ‌ ಈ‌ ಬರವಣಿಗೆ ಕರ್ನಾಟಕ ಜನತಾ ಪಕ್ಷದ ಪ್ರಣಾಳಿಕೆ ಅನ್ನಿಸಿದ್ದರೆ ಕ್ಷಮಿಸಿ. ರಾಜಕೀಯ ಅಂದರೆ ಅಷ್ಟೇ ಜನರಿಗೆ ಸಿಂಬಲ್ಸ್ ತೋರಿಸಿ ಮೋಸ ಮಾಡೋದು. ಸೈಕಲ್ ಸಿಂಬಲ್ ತೋರಿಸಿದರೆ ಎಲ್ರೂ ಆ ಸಿಂಬಲ್ ಜೊತೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಮತ್ತು ವೋಟ್ ಹಾಕ್ತಾರೆ ಅನ್ನುವುದು ರಾಜಕಾರಣಿಗಳ ಚಿಂತನೆ. ನನ್ನಗೆ ಸೈಕಲ್ ಸಿಂಬಲ್ ಅಲ್ಲಾ ಅದು ಒಂದು ತತ್ತ್ವ. ಈ ತತ್ತ್ವವನ್ನು ಯಾವ ರೀತಿ ಜನರಿಗೆ ತಲುಪಿಸಬೇಕು ಅನ್ನುವ ಬಗ್ಗೆ ಆಗಾಗ ಯೋಚನೆ ಮಾಡ್ತಾ ಕೈಗೆ ಬಂದದ್ದು ಗೀಚಿ ನನ್ನ ಚಪಲವನ್ನು ತೀರಿಸಿಕೊಳ್ಳುತ್ತೇನೆ.

ಈ ನನ್ನ ಲೇಖನ ಈ ಕರ್ನಾಟಕ ರಾಜ್ಯಕ್ಕೆ ಸಂಭಂದಿಸಿದ್ದು ಮತ್ತು ರಾಜ್ಯದ ಜನರು ತಾವು ಮುಂದೆ ಹೇಗೆ ಬದುಕ ಬೇಕು ಅನ್ನುವ ಬಗ್ಗೆ ಬೆಳಕು ಚೆಲ್ಲುವ ಯತ್ನವಷ್ಟೆ. ಸದ್ಯಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಮುದಾಯ ಸೈಕಲ್ ನಮ್ಮ ನಗರಗಳಲ್ಲಿ ಕಲ್ಪಿಸುವ ಬಗ್ಗೆ ಸಂಶೋಧನೆಯನ್ನು ನಾನು ಮಾಡ್ತಾಯಿದ್ದೇನೆ.ಈ ಸಂಶೋಧನೆ ಯಶಸ್ಸು ಕಾಣಬೇಕು ಅನ್ನುವ ಹಂಬಲ ನನ್ನದು.

ಈ‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ವಿಜ್ಞಾನಿಗಳಿಂದ ಒಂದು ಕೆಟ್ಟ ಛಾಳಿ ನನ್ನ ತಲೆಗೆ ಅಂಟಿದೆ. ಏನಪ್ಪಾ‌ ಅದು ಛಾಳಿ? ಯಾವುದೇ ವಿಷಯವನ್ನು ಮಂಡಿಸಿದರೂ ಸಾಕ್ಷಿ ಆಧಾರ ಮತ್ತು ಅಂಕಿ ಅಂಶಗಳನ್ನು ಕೇಳುತ್ತಾರೆ ಮತ್ತು ಅದರ ಮೇಲೆ ವಾದ ವಿವಾದ ಮಾಡ್ತಾರೆ. ಈ‌ ಅಂಕಿ ಅಂಶದ ಜೊತೆಯಲ್ಲಿ ಬಣ್ಣ ಬಣ್ಣದ ಗ್ರಾಫ್ ಗಳನ್ನು ಒದಗಿಸಿದರೆ ತಲೆದೂಗಿ ಭೇಷ್ ಅನ್ನುತ್ತಾರೆ.

ಈ ನನ್ನ ಲೇಖನವನ್ನು ಚಿತ್ರ ಕತೆ ಅನ್ನುವ ಬದಲಿಗೆ ಚಾರ್ಟ್ ಚರಿತ್ರೆ ಅಂದರೆ ಸೂಕ್ತ. ಮೊದಲನೇ ಗ್ರಾಫ್ ನಮ್ಮ ರಾಜ್ಯದ ಜನ ಎಷ್ಟು ಪೆಟ್ರೋಲ್ ಮತ್ತು ಎಷ್ಟು ಡೀಸಲ್ ಕುಡಿಯುತ್ತಿದ್ದಾರೆ ಅನ್ನುವುದು ತೋರಿಸುತ್ತದೆ. ಅಂದರೆ ಸರಾ ಸರಿ ಒಬ್ಬೊಬ್ಬರು ........ರಷ್ಟು ಲೀಟರ್ ಪೆಟ್ರೋಲ್ ಮತ್ತು ಡೀಸಲ್ ಕುಡಿದಿದ್ದಾರೆ ಎನ್ನಬಹುದು.

ಈ ಪೆಟ್ರೋಲ್ ಮತ್ತು ಡೀಸಲ್ ಅಮಲು ಜನರ ನೆತ್ತಿಗೇರಿ ಆಗಿರುವ ಅಪಘಾತಗಳ ಚಾರ್ಟ್ ನೋಡೋಣ.


ಮುಂದಿನ ಚಾರ್ಟ್ ಇಷ್ಟೊಂದು ಪೆಟ್ರೋಲ್ ಆಕಾಶದಿಂದ ಬರೋದಿಲ್ಲಾ. ನಾವು ಸಾಪ್ಟ್ ವೇರ್ ಕಂಪನಿಯವರು ಬೆವರು ಸುರಿಸಿ ಅಮೇರಿಕಾದಿಂದ ತಂದ ಡಾಲರ್ ಗಳನ್ನು ಅರಾಬ್ ದೇಶದವರಿಗೆ ಕೊಟ್ಟು ತರುತ್ತೇವೆ.ಹಾಗಿದ್ದರೆ ಈ‌ ಕಂಪನಿಗಳು ಎಷ್ಟು ಗಳಿಸುತ್ತಿವೆ ನೋಡೋಣವೆ.


ಈ ಕಂಪನಿಗಳು ಬಾರಿ ಮೊತ್ತದ ಹಣವನ್ನು ಗಳಿಸಿದ್ದಾರೆ. ಆದರೆ ಗಳಿಸಿದ 10% ನಾವು ತೈಲಕ್ಕಾಗಿ ತೇಲಿ ಬಿಡುತ್ತಿದ್ದೇವೆ. ಐ.ಟಿ ಕಂಪನಿಗಳು ಚಾಕರಿ ಮಾಡಿಸ್ಕೊಂಡೂ ಮನೆಗೆ ಕಳಿಸುವಷ್ಟರಲ್ಲಿ ಜೀವ ಕೈಗೆ ಬಂದಿರುತ್ತೆ. ಅದಲ್ಲದೇ ಮೈ ಕೈ ಗೆ ಅಷ್ಟು ತ್ರಾಸಾಗದೆ ಮೆದಳಿಗೆ ಮಾತ್ರ ಕೆಲಸ ಕೊಡುವ ಈ‌ ವೃತ್ತಿಯಿಂದ ದೇಹಕ್ಕೆ ವ್ಯಾಯಾಮ ಆಗುವುದಿಲ್ಲಾ. ಯಾವಾಗ ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗುತ್ತದೆಯೋ ದೇಹ ವಿಶೇಷವಾಗಿ ಡಯಾಬಿಟಿಸ್, ಹೃದಯಘಾತಕ್ಕೆ ಬಲಿಯಾಗುವ ಸಂಭವ ಹೆಚ್ಚು. ಹಾಗಿದ್ದರೆ ಈ ರೋಗ ಮತ್ತು ಅದಕ್ಕೆ ತಗಲುವ ಖರ್ಚಿನ ಚಾರ್ಟ್ ನೋಡೋಣವೆ.


ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಸುಲಭವಾಗಿ ಕಾರ್ ಕೊಳ್ಳುವ ಸೊಉಲಭ್ಯವಿರುತ್ತದೆ. ಬೆಂಗಳೂರಿನಲ್ಲಿ ಕಾರ್ ಮತ್ತು ಆಟೋಮೋಬೈಲ್ ಗಳ ಬೆಳವಣಿಗೆಯ ಚಾರ್ಟ್ ನೋಡುವ. ಈ ಕಾರ್ ಗಳು ಆಕ್ರಮಿಸಿಕೊಳ್ಳುವ ಜಾಗದ ಬಗ್ಗೆ ಒಂದು ಚಾರ್ಟ್ ಕೆಳಗಿದೆ. ಅಂದರೆ ಸರಾ ಸರಿ .............ರಷ್ಟು ಭೂಮಿ ನಮ್ಮ ಕಾರ್ ಗಳನ್ನು ನಿಲ್ಲಿಸುವುದಕ್ಕೆ ಸದುಪಯೋಗಗಳಿಸುತ್ತೇವೆ.ಮೊನ್ನೆ ಮೊನ್ನೆ ಈಜೀಪುರದಿಂದ ಬಡಬಂಧುಗಳನ್ನು ಎತ್ತಂಗಡಿ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಭೂಮಿಯನ್ನು ರಿಯಲ್ ಎಸ್ಟೇಟ್ ಆಗಿ ಪರಿವರ್ತಿಸಿ ನೆಲಕ್ಕೆ ವಿಪರೀತ ಬೆಲೆ ಕಟ್ಟಿ ಇಷ್ಟೋಂದು ಜಾಗವನ್ನು ಅನ್ಯಾಯವಾಗಿ ದುರುಪಯೋಗಗೊಳಿಸುತ್ತಿದ್ದಾನೆ ಮಾನವ. ಈ‌ ಪಾಟಿ 'ಕಾರ್, ಕಾರ್, ' ಎಲ್ಲಿ ನೋಡಿದರು ಕಾರ್ ಅನ್ನುವ ಯುಗದಲ್ಲಿ ದೇವರು ನನಗೆ ಮಾತ್ರ ಸೈಕಲ್ ತುಳಿಯುವ ದುರ್ಬುಧ್ಧಿಯನ್ನು ಯಾಕೆ ಕೊಟ್ಟನೋ ?


ಈವತ್ತು ಭೂಮಿ ಜೊತೆ ಮಾನವನ ಸಂಪರ್ಕ ಕಡೆದು ಹೋಗಿದೆ. ಆಕಾಶದಲ್ಲಿ ಸ್ಯಾಟಿಲೈಟ್ ಗಳ ಜೊತೆ ಸಂಪರ್ಕ ಸಾಧಿಸುವ ಯತ್ನದಲ್ಲಿ ನೆಲೆ ಕಳ್ಕೊಂಡಿರುವ ಅತಿ ಬುದ್ಧಿವಂತ ಮಾನವನಿಗೆ ಮತ್ತೆ ಭೂಮಿಯ ಜೊತೆ ಸಂಪರ್ಕ ಸಾಧ್ಯವಾಗಬೇಕಾದರೆ ಊರು ಕೇರಿ ಚಿಕ್ಕದಾಗಿ ಚೊಕ್ಕವಾಗಿರ ಬೇಕು . ಯೂರೋಪ್ ಖಾಂಡದ ನಗರಗಳಿಗೆ ಅಲ್ಲಿಯ ಸರ್ಕಾರಗಳು ಕಾರ್ಬನ್ ಮುಕ್ತ ಅಂದರೆ ಆದಷ್ಟು ಸೈಕಲ್ ಅಥವಾ ಸಮುದಾಯ ಬಸ್ಸ್/ರೈಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದು. ಕಾರ್ ಪಾರ್ಕಿಂಗ್ ಜೊತೆ ಜೊತೆಗೆ ಅವುಗಳ ವೇಗಕ್ಕೂ ಕಡಿವಾಣ ಮತ್ತು ಅವು ಎಲ್ಲೆಂದರಲ್ಲಿ ಅಲ್ಲಿಗೆ ನುಗ್ಗುವ ಅವಕಾಶವಿರುವುದಿಲ್ಲಾ. ಒಟ್ಟಿನಲ್ಲಿ ನಗರಗಳು ಕಾರ್ಬನ್ ಮುಕ್ತ ನಗರಗಳಾಗಿರಬೇಕು. ಕಾರ್ ಕೇಂದ್ರಿಕೃತ ಊರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುವ ಒತ್ತಡ ಮತ್ತು ಆವಶ್ಯಕತೆಯಲ್ಲಿ ಮಾನವ ಸಂಬಂಧದ ಕೊಂದಿ ಕಳಚಿ ಬಿದ್ದಿರುತ್ತದೆ. ನಗರಗಳ ಸಂಚಾರ ವ್ಯವಸ್ಥೆಯಲ್ಲಿ 'ಸೈಕಲ್' ಪ್ರಧಾನವಾಗಿಟ್ಟುಕೊಂಡು ಕಟ್ಟಿದಾಗ ಅಲ್ಲಿ ವಾಸ ಯೋಗ್ಯವಾಗಿರುವ ಪರಿಸರ ತಾನೇ ತಾನಾಗಿ ಸೃಷ್ಠಿಯಾಗುತ್ತದೆ. ಅದಲ್ಲದೇ ನಗರಗಳಲ್ಲಿ ಸಮಾನತೆ ಮತ್ತು ಸೊಉಹಾರ್ದತೆ ತಾನೇ ತಾನಾಗಿ ಮೂಡುತ್ತದೆ.

ಕರ್ನಾಟಕ ಸೈಕಲ್ ರಿಪಬ್ಲಿಕ್ ಹೇಗೆ ಆಗಬಹುದು ? ಇದಕ್ಕಾಗಿ ನಾನು ಆರು ಸೂತ್ರವನ್ನು ಮಂಡಿಸುತ್ತೇನೆ.
೧) ಒಂದು ಅತ್ಯಂತ ಚೇತನ ಶೀಲ ಸೈಕಲ್ ಉತ್ಪಾದಿಸುವ ಕಂಪನಿಗಳು.
೨) ಎರಡನೆಯದು ಸೈಕಲ್ ಸವಾರಿಗೆ ಬೇಕಿರುವ ಸುರಕ್ಷಿತ ಹಾದಿ ಎಲ್ಲಾ‌ ನಗರಗಳಲ್ಲಿ ಕಲ್ಪಿಸ ಬೇಕು.
೩) 'ಸಮುದಾಯ ಸೈಕಲ್ ' ವ್ಯವಸ್ಥೆಯನ್ನು ನಮ್ಮ ಕರ್ನಾಟಕದ ಎಲ್ಲಾ‌ ನಗರಗಳಲ್ಲಿಯೂ ಸೃಷ್ಠಿಸುವುದು.
೪) ಸೈಕಲ್ ಪ್ರವಾಸೋದ್ಯಮವನ್ನು ಪೋಷಿಸುವುದು.
೫) ಸೈಕಲ್ ಕ್ರೀಡೆಗೆ ಪ್ರೋತ್ಸಾಹಿಸಲು ಸೂಕ್ತ ತರಬೇತಿಯೊಂದಿಗೆ ವ್ಯ್ವಸ್ಥೆಯನ್ನು ಮಾಡುವುದು.
೬) ಸೈಕಲ್ ಮತ್ತು ಮಾಲಿನ್ಯ ರಹಿತ , ಸುರಕ್ಷಿತ ಚಲನೆಯ ಬಗ್ಗೆ ಅರಿವನ್ನು ಮೂಡಿಸುವುದು.

ಈ‌ ಆರು ಸೂತ್ರಗಳನ್ನು ವಿವರವಾಗಿ ಕೆಳಗೆ ಓದಬಹುದು.

ಒಂದು ಅತ್ಯಂತ ಚೇತನಶೀಲ ಸೈಕಲ್ ಉತ್ಪಾದಿಸುವ ಕಂಪನಿ:

ನಮ್ಮ ನಾಡಿನಲ್ಲಿ ಕಬ್ಬಿಣದ ಅದಿರು ಸಾವಕಾಶವಾಗಿ ಸಿಗುತ್ತದೆ. ಈ ಅದಿರನ್ನು ನಾವು ಚೀನಾ ದೇಶಕ್ಕೆ ರಪ್ತು ಮಾಡುತ್ತೇವೆ. ಈ ರಪ್ತು ಮಾಡಿದವರನ್ನು ನಮ್ಮ ನಾಯಕರನ್ನಾಗಿ ನೇಮಕ ಮಾಡಿಕೊಳ್ಳುತ್ತೇವೆ. ಚೀನಾ ಮತ್ತು ಜಪಾನ್ ನಮ್ಮ ಅದಿರನ್ನು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಿ ' ಸ್ಟೀಲ್ ' ಮತ್ತು 'ಸ್ಟೀಲ್ ಸಂಭಂದಿತ ವಸ್ತುಗಳನ್ನು ತಯಾರಿಸಿ ವಿಶ್ವ ಮಾರುಕಟ್ಟೆಗೆ ಕಳುಹಿಸುತ್ತಾರೆ. ಸಂತೋಷ್ ಹೆಗ್ಡೆಯವರ ವರದಿಯಂತೆ ನಮ್ಮ ಅದಿರಿನ ಉತ್ಪನ್ನ ಮತ್ತು ರಪ್ತು ಮಾಡೀರುವ ಅಂಶವನ್ನು ಇಲ್ಲಿ ಬರೆದಿದ್ದೇನೆ.
ಗಣಿ ಅವ್ಯಾವಹಾರದ ವರದಿಯನ್ನು ನೀವು ಓದಿದರೆ ತಿಳಿಯುತ್ತದೆ ನಾವು ನಮ್ಮ ಮೂಲ ಸಂಪನ್ಮೂಲಗಲನ್ನು ಎಷ್ಟು ಬೇಜವಾಬ್ದಾರಿಯಿಂದ ರಾಜಕಾರಣಿಗಳ ಲಾಭಕೋರತನಕ್ಕಾಗಿ ಧಾರೆಯೆರೆದಿದ್ದೇವೆ. ಮೂಲ ಸಂಪನ್ಮೂಲಗಳನ್ನು ಲಪಟಾಯಿಸುವವರನ್ನೇ ನಮ್ಮ ನಾಡಿನ ವಕ್ತಾರರನ್ನಾಗಿಯೂ ಮತ್ತು ನಾಯಕರನ್ನಾಗಿ ಮಾಡಿ, ಈ ನಾಲಾಯಕ್ ನಾಯಕರು ಮತ್ತೆ ಜನರನ್ನು ಶೋಷಿಸುವಂತಹ ಪರಮ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ನಾವು ಪೋಷಿಸಿರುವುದು ಕನ್ನಡ ನಾಡಿನ ದುರಂತ. ಇರಲಿ ರಾಜಕೀಯದಿಂದ ಅರ್ಥಿಕ ವ್ಯವಹಾರದತ್ತ ಬರೋಣವೆ?

ಬಳ್ಳಾರಿ ಜಿಲ್ಲೆಯ ಜಿಂದಾಲ್ ಸ್ಟೀಲ್ ಕಂಪನಿಯ ನಿರ್ದೇಶಕರಿಗೆ ಒಂದು ಮನವಿ ಸಲ್ಲಿಸಿದೆ. ಹುಬ್ಬಳ್ಳಿಯಲ್ಲಿಯೋ ಅಥವಾ ಉತ್ತರ ಕರ್ನಾಟಕದಲ್ಲಿ ಸೈಕಲ್ ಉತ್ಪಾದನೆ ಮಾಡುವ ವಿಶೇಷವಲಯಗಳನ್ನು ನಿರ್ಮಾಣ ಮಾಡುವುದು. ಸೈಕಲ್ ಉತ್ಪಾದನೆಗೆ ಬೇಕಾಗಿರುವ ಜಾಗ ಕೂಡ ಅತೀ ಕಡಿಮೆ. ಇಲ್ಲಿ ನಾವು ಎಲ್ಲಾ‌ ರೀತಿಯ ಸೈಕಲ್ ಗಳನ್ನು ಉತ್ಪಾದನೆ ಮಾಡಿ ಹೊರಗಿನ ದೇಶಕ್ಕೆ ರಪ್ತು ಮಾಡುವಂತಾಗಬೇಕು. ಕೆಳಗೆ ಕೆಲವು ಸೈಕಲ್ ಮತ್ತು ಅವುಗಳ ಉಪಯುಕ್ತತೆಯನ್ನು ವಿವರಿಸಿದ್ದೇನೆ. ಈ ವಿಶೇಷ ವಲಯದಲ್ಲಿ ಸೈಕಲ್ ಉತ್ಪಾದನೆ ಮಾಡಲು ವಿಶ್ವದ ಎಲ್ಲಾ‌ ಸೈಕಲ್ ತಯಾರಕರನ್ನು ಮುಕ್ತವಾಗಿ ಆಹ್ವಾನಿಸಿ ಸಕಲ ಸೊಉಕರ್ಯಗಳನ್ನು ಕಲ್ಪಿಸಬೇಕು. ಇದರಿಂದ ಜಡಗಟ್ಟಿ ನಿಂತಿರುವ ಭಾರತದ ಸೈಕಲ್ ಕಂಪನಿಗಳಿಗೆ ಬಿಸಿ ಮುಟ್ಟಿ ಚುರುಕಾಗುತ್ತವೆ.

ಟೈವಾನ್ ದೇಶ ಹೈ ಎಂಡ್ ಅಥವಾ‌ ಉತ್ತಮ ಗುಣಮಟ್ಟದ ಸೈಕಲ್ ಉತ್ಪಾದನೆಯಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಸೈಕಲ್ ಕಂಪನಿಗಳಿಗೆ ವಿಶ್ವದಲ್ಲಿಯೆ ನಂಬರ್ ಒನ್ ಆಗುವ ಸಾವಕಾಶ ಮತ್ತು ಹಣ ಎರಡು ಇತ್ತು. ಆದರೆ ಶ್ರಧ್ಧೆ ಇರದ ಕಾರಣ ಈವತ್ತಿಗೂ‌ ಉತ್ತಮ ಗುಣ ಮಟ್ಟದ ಸೈಕಲ್ ನಮ್ಮ ದೇಶದಲ್ಲಿ ಮಾಡುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ.

ಕನ್ನಡ ನಾಡಿನ ಜನರು ಜಾಗತಿಕ ಮಟ್ಟದಲ್ಲಿ ಕಟ್ಟಿರುವ ಕಂಪನಿಯೆಂದರೆ ವಿಪ್ರೋ ಮತ್ತು ಇನ್ಫೋಸಿಸ್. ಆದರೆ ಐ.ಟಿ. ವ್ಯವಹಾರವನ್ನು ಬಿಟ್ಟು ಮಿಕ್ಕ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಯಾವುದಿವೆ, ಅವು ಕರ್ನಾಟಕದಲ್ಲಿ ಬುಧ್ಧಿವಂತರನ್ನು ತನ್ನ ಕಡೆಗೆ ಸೆಳೆಯುತ್ತಿಲ್ಲಾ. ನಾನು ತಿಳಿದ ಮಟ್ಟಿಗೆ ಪಿ.ಯು.ಸಿ ನಂತರ 'ಮೈನಿಂಗ್ ಇಂಜಿನಿಯರಿಂಗ್' ಶಾಖೆಗೆ ಯಾರು ಹೋಗುವುದಿಲ್ಲಾ. ಎಲ್ಲರೂ ಬಯಸುವುದು ಐ.ಟಿ ಬ್ರಾಂಚನ್ನು. ಈ ರೀತಿ ಒಂದೆ ಹಾದಿಯಲ್ಲಿ ಹೋಗುವುದರಿಂದ ವೈವಿಧ್ಯವುಳ್ಳ ಜ್ಞಾನ ಮತ್ತು ವೃತ್ತಿಗಳೆರಡು ನಶಿಸಿಹೋಗುತ್ತದೆ. ಅಥವಾ‌ ಕಳಪೆ ಮಟ್ಟದಾಗಿರುತ್ತದೆ. ಈಗ ನಮ್ಮ ದೇಶದಲ್ಲಿ ಸೈಕಲ್ ಉತ್ಪಾದನೆ ಮಾಡುವ ಕಂಪನಿಗಳೆಲ್ಲ ಲೂದಿಯಾನದಲ್ಲಿ ಬೇರೂರಿದೆ. ಲೂದಿಯಾನದಲ್ಲಿ ತಂತ್ರಜ್ಞಾನದ ಅಭಾವವಿರುವುದರಿಂದ ಅಲ್ಲಿಗೆ ಯಾವ ಡಿಸೈನರುಗಳು ಹೋಗುವುದಿಲ್ಲಾ. ಸೈಕಲ್ ಡಿಸೈನ್ ಮಾಡುವುದಕ್ಕೆ ತಾಂತ್ರಿಕ ಕುಶಲತೆ ಮತ್ತು ವಿಶಾಲ ಅನುಭವ ಅತ್ಯಂತ ಆವಶ್ಯಕ. ಸೈಕಲ್ ಡಿಸೈನ್ ಬಗ್ಗೆ ಹೇಳಬೇಕಾದರೆ

ವಿದೇಶದಲ್ಲಿ ಎಂತೆಂತಹ ಸೈಕಲ್ ಉತ್ಪಾದನೆ ಮಾಡಿದ್ದಾರೆ ಮತ್ತು ಅವುಗಳನ್ನು ಹೇಗೆ ಬಳಸುತಿದ್ದಾರೆ ಎನ್ನುವುದು ಕೆಳಗೆ ಚಿತ್ರಿಸಿದ್ದೇನೆ.

ಈ ಮಾದರಿಯಲ್ಲಿ ಸೈಕಲ್ ಉತ್ಪಾದನೆ ಜರುಗಿದರೆ ನಮ್ಮ ಜನರು ಸೈಕಲ್ ಪ್ರೀತಿಸಲು ಪ್ರಾರಂಭಿಸುತ್ತಾರೆ. ಇಂತಹ ಸೈಕಲ್ ಗಳು ಉತ್ಪಾದನೆಯಿಂದ ಬಡವರ ಸಂಚಾರ ದಿನೇ ದಿನೇ ಜರುಗುವ ತೈಲ ಬೆಲೆ ಏರಿಕೆಯ ಒತ್ತಡದಿಂದ ಬಿಡುಗಡೆಯನ್ನು ಪಡೆಯುತ್ತದೆ. ಸಣ್ಣ ಸಣ್ಣ ನಗರಗಳಲ್ಲಿ ಆಟೋ‌ ಬದಲಿಗೆ ಪೆಡಿ ಕ್ಯಾಬ್ ಗಳು ಬಂದರಂತೂ, ಆಟೋ ದವರ ಪ್ರಲಾಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.


ಲೇಖಕ: ಮುರಳಿ ಎಚ್. ಆರ್.
ಪರಿಸರ ಪ್ರೇಮಿ, ಸೈಕಲ್ ಚಾಲಕ ಹಾಗೂ ಸೈಕಲ್ ಚಾಲನೆಯ ಮಹತ್ವಗಳ ಪ್ರಚಾರಕ. ಸೈಕಲ್ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬುದು ಮುರಳಿ ಅವರ ಹೊಸ ಕನಸು. ಬಿಎಂಟಿಸಿ ಜತೆ ಕೈ ಜೋಡಿಸಿ ಎಲ್ಲಾ ಟಿಟಿಎಂಸಿಗಳಲ್ಲಿ ಸೈಕಲ್ ಬಸ್‌ಗಳನ್ನು ರೂಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದಲ್ಲದೆ ಸೈಕಲ್ ಆರ್ಥಿಕತೆ ಕುರಿತು ಗುಬ್ಬಿ ಲ್ಯಾಬ್ಸ್ ಜತೆಗೂಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹಣಕಾಸು ವ್ಯವಸ್ಥೆಗೆ ಸೈಕಲ್‌ಗಳು ಹೇಗೆ ನೆರವಾಗಿವೆ ಎಂಬುದನ್ನು ತಿಳಿಸುವುದು ಸಂಶೋಧನೆಯ ಉದ್ದೇಶ. ದಿನಪತ್ರಿಕೆ ಮಾರುವವರು, ಕೊರಿಯರ್ ಸಂಸ್ಥೆಗಳು, ಹಾಲು ಮಾರಾಟಗಾರರು ಇತ್ಯಾದಿ ಸಮುದಾಯಗಳ ಸೈಕಲ್ ಬಳಕೆ ಹಾಗೂ ಅದರ ಆರ್ಥಿಕ ಲಾಭಗಳನ್ನು ಸಂಶೋಧನೆಯಲ್ಲಿ ಅವಲೋಕಿಸಲಾಗುತ್ತಿದೆ.
Read More

© 2011 ಸಂಚಯ, AllRightsReserved.

Designed by ScreenWritersArena